ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ

ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ

ನವದೆಹಲಿ, ಮೇ 15: ‘ನ್ಯೂಸ್‌ಕ್ಲಿಕ್’ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಬಂಧಿಸಿರುವುದನ್ನು ಸುಪ್ರೀಂಕೋರ್ಟ್ ಬುಧವಾರ ಅಸಿಂಧು ಎಂದು ಘೋಷಿಸಿದ್ದು, ಅವರನ್ನು ತಕ್ಷಣ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ಆದೇಶ ಹೊರಡಿಸಿದೆ. ಪಂಕಜ್ ಬನ್ಸಾಲ್ ಪ್ರಕರಣದ ನಂತರ ಮೇಲ್ಮನವಿದಾರರು ಬಂಧನದಿಂದ ಬಿಡುಗಡೆಗೆ ಅರ್ಹನಾಗಿದ್ದಾನೆ. ರಿಮಾಂಡ್ ಆದೇಶ ಅಸಿಂಧು ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದ್ದಾರೆ. ಪಂಕಜ್ ಬನ್ಸಾಲ್ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ನೀಡಿದ ತೀರ್ಪಿನಲ್ಲಿ ಆರೋಪಿಗಳಿಗೆ ಲಿಖಿತವಾಗಿ ಬಂಧನದ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಚೀನಾ ಪರ ಪ್ರಚಾರ ಮಾಡಲು ಹಣ ಪಡೆಯಲಾಗಿದೆ ಎಂದು ನ್ಯೂಸ್‌ಕ್ಲಿಕ್ ವಿರುದ್ಧ ನ್ಯೂಯಾರ್ಕ್ ಟೈಮ್ಸ್ ತನಿಖೆ ಆಪಾದಿಸಿದ ಕೆಲವು ದಿನಗಳ ನಂತರ, ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ಪ್ರಬೀರ್‌ ಪುರ್ಕಾಯಸ್ಥ ಅವರನ್ನು ಅಕ್ಟೋಬರ್ 3ರಂದು ಬಂಧಿಸಲಾಗಿತ್ತು.

ಮಾರ್ಚ್‌ನಲ್ಲಿ ಈ ಕುರಿತು ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿತ್ತು, ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ಮತ್ತು ಪ್ರಬೀರ್‌ ಪುರ್ಕಾಯಸ್ಥ ಅವರು ಭಯೋತ್ಪಾದಕರಿಗೆ ಧನಸಹಾಯ ಮತ್ತು ಚೀನಾದ ಪರ ಪ್ರಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ನೆವಿಲ್ಲೆ ರಾಯ್ ಸಿಂಗಮ್, ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರಸ್ಪರ ನೇರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ತೋರಿಸುವುದು ಹೇಗೆ ಎಂದು ಇವರು ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಹೆಸರಿನಲ್ಲಿ ಪಿಪಿಕೆ ನ್ಯೂಸ್‌ಕ್ಲಿಕ್, ಜಿಸ್ಪಾನ್ ಇಂಡಿಯಾ, ಜೆಜೆ ಎಂಟರ್‌ಪ್ರೈಸಸ್, ವರ್ಚುನೆಟ್ ಸಿಸ್ಟಮ್ ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂ. ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪ್ರಬೀರ್ ಪುರ್ಕಾಯಸ್ಥ ಅವರು ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ ಗುಂಪಿನೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ ಎಂದು ಕೂಡ ಆರೋಪಿಸಲಾಗಿತ್ತು. ಅಮಿತ್ ಚಕ್ರವರ್ತಿ ನಂತರ ಪ್ರಕರಣದಲ್ಲಿ ಅನುಮೋದಕರಾಗಿ ಬದಲಾಗಿದ್ದಾರೆ ಮತ್ತು ಚಾರ್ಜ್ ಶೀಟ್‌ನಲ್ಲಿ ಸಾಕ್ಷಿ ಎಂದು ಹೆಸರಿಸಲಾಗಿದೆ. ಚಕ್ರವರ್ತಿ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ಮೇ 6 ರಂದು ಆದೇಶ ನೀಡಿತ್ತು. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಶಂಕಿತರು ಮತ್ತು ದತ್ತಾಂಶಗಳ ವಿಶ್ಲೇಷಣೆಯ ಭಾಗವಾಗಿ ಅಕ್ಟೋಬರ್ 3ರಂದು ದೆಹಲಿಯಲ್ಲಿ 88 ಸ್ಥಳಗಳಲ್ಲಿ ಮತ್ತು 7 ರಾಜ್ಯಗಳಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ 300 ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Previous Post
ಎಫ್‌ಸಿಐ ಗೋದಾಮಿನಲ್ಲಿ ಕೊಳೆಯುತ್ತಿರುವ 18 ಮಿಲಿಯನ್ ಟನ್ ಅಕ್ಕಿ
Next Post
ಸಿಎಎ ಅಡಿ 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ವಿತರಣೆ

Recent News