ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ ಕಾನೂನು ಹೋರಾಟ: ಗೃಹ ಸಚಿವ ಪರಮೇಶ್ವರ

ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ ಕಾನೂನು ಹೋರಾಟ: ಗೃಹ ಸಚಿವ ಪರಮೇಶ್ವರ

ಬೆಂಗಳೂರು (ಆಗಸ್ಟ್ 10):- ಮೂಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.  ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ, ಕಾನೂನು ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟ ಪ್ರಾರಂಭವಾದ ಬಳಿಕ ಮುಂದಿನ ಬೆಳವಣಿಗೆ ಏನೆಂಬುದನ್ನು ಗಮನಿಸಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿರ್ಧರಿಸಲಾಗುವುದು‌ ಎಂದು ಹೇಳಿದರು. ಹತ್ತಾರು ಪ್ರಕರಣಗಳು ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿವೆ. ಯಾವುದಕ್ಕು ಕೂಡ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಮುಂದಾಗಿಲ್ಲ. ಮೂಡಾ ವಿಚಾರದಲ್ಲಿ ತುರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ. ಜುಲೈ 26ರಂದು ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ಮನವಿ ಕೊಡುತ್ತಾರೆ. ಅದೇ ದಿನ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಮುಖ್ಯ ಕಾರ್ಯದರ್ಶಿಯವರು ಹೋಗಿ ಸ್ಪಷ್ಟನೆ ನೀಡಿ ಬಂದಿದ್ದಾರೆ.‌ ಅದೇ‌ದಿನ ಸಂಜೆ ಸಿಎಂ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ರಾಜ್ಯಪಾಲರು ಹೇಳಬೇಕಲ್ಲವೇ ಎಂದು ಮರುಪ್ರಶ್ನಿಸಿದರು. ರಾಜ್ಯಪಾಲರು ಸಾಮಾನ್ಯ ರಾಜಕಾರಣಿಯೋ ಅಥವಾ ಅಧಿಕಾರಿಯೋ ಅಲ್ಲ. ಸಂವಿಧಾನದ ಮುಖ್ಯಸ್ಥರು. ಅನೇಕ ಪ್ರಕರಣಗಳು ಅವರ ಕಚೇರಿಯಲ್ಲಿ ಬಾಕಿ ಉಳಿದು, ಯಾವುದಕ್ಕು ಗಮನ ಹರಿಸದೇ ಏಕಾಏಕಿ ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡುತ್ತೇವೆ ಎಂದರು. ಬಿಜೆಪಿ ಕಾಲದಲ್ಲಿ ಸಾಕಷ್ಟು ಹಗರಣಗಳಾಗಿವೆ. ತನಿಖೆಗೆ ಆದೇಶ ಮಾಡಿದ್ದೇವೆ. ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಕ್ಯಾಟಿನೆಟ್‌ನಲ್ಲಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಅಡ್ವೋಕೇಟ್ ಜನರಲ್‌ಗೆ ತಿಳಿಸಲಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು‌. ಕೆಲವು ದಿನಗಳಲ್ಲಿ ಸರ್ಕಾರದಲ್ಲಿ ಯಾರು ಎಲ್ಲೆಲ್ಲಿರಬೇಕು, ಏನೇನಾಗುತ್ತದೆ ಎಂದು ಕಾದು ನೋಡಿ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಲಿ ನಮ್ಮದೇನು ತಕಾರಾರು ಇಲ್ಲ. ಅದಕ್ಕು ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿ. ಬೇರೆ ಬೇರೆ ಪ್ರಕರಣಗಳ ಕುರಿತು ತನಿಖೆ ಆಗುತ್ತಿದೆ. ದೇವರಾಜು ಅರಸು ಟ್ರಕ್ ಟರ್ಮಿನಲ್‌ನಲ್ಲಿ 47 ಕೋಟಿ ರೂ. ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ  ಕಂಡು ಬಂದಿದೆ. ಅಧಿಕಾರಿಗಳನ್ನು ಬಂದಿಸಲಾಗಿದೆ. ಗಮನದಲ್ಲಿ ಇತ್ತು, ಇರಲಿಲ್ಲ ಎಂಬುದರ ಕುರಿತು ಬಿಜೆಪಿಯವರು ಉತ್ತರಿಸಲಿ ಎಂದು ಹೇಳಿದರು. ಲೋಕಸಭಾ ಚುನಾವಣೆ ಬಳಿಕ ದ್ವೇಷದ ರಾಜಕಾರಣ ಪ್ರಾರಂಭವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಟೀಕೆಗಳ ಮಾತುಗಳು ಬರಬಾರದು. ಆಡಳಿತ ಮಾಡುವವರ ಬಗ್ಗೆ ಜನ ಬೇರೆ ವಿಚಾರಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅದನ್ನು ಮೀರಿ ಹೋದಾಗ ರಾಜಕಾರಣ ಅನ್ನಿಸಿಕೊಳ್ಳುವುದಿಲ್ಲ ಎಂದರು. ಸರ್ಕಾರ ಬೀಳಿಸುವುದು ಸುಲಭವೇ?, 136 ಶಾಸಕರಿದ್ದೇವೆ. ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ನೀವೆ ಹೇಳಿ. 10ರೊಳಗಾಗಿ ಸರ್ಕಾರ ಬೀಳುತ್ತೆ ಅಂದಿದ್ರು, ಸರ್ಕಾರ ಬಿತ್ತೇ? ಈಗ ಮೂರು ತಿಂಗಳು ಅಂತಿದ್ದಾರೆ, ನೀವು ಮೂರು ತಿಂಗಳು ಕಾಯಬೇಕು. ಸರ್ಕಾರ ಬೀಳಿಸುವುದು ತಮಾಷೆಯಲ್ಲ ಎಂದು ಎಚ್ಚರಿಸಿದರು.

Previous Post
1,769 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್
Next Post
ಟಿಮೋರ್ ಲೆಸ್ಟ್‌ಗೆ ರಾಷ್ಟ್ರಪತಿ ಮುರ್ಮು ಭೇಟಿ; ದ್ವಿಪಕ್ಷೀಯ ಸಂಬಂಧ ಚರ್ಚೆ

Recent News