ಪ. ಬಂಗಾಳ ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ಅಧಿಕಾರಿಗಳ ವಿರುದ್ಧ FIR
ಕೋಲ್ಕತ್ತಾ, ಮೇ 18: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಾಜಭವನದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ ನಂತರ ಮೂವರು ಅಧಿಕಾರಿಗಳ ವಿರುದ್ಧ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮೇ 2ರಂದು ರಾಜಭವನದಿಂದ ನಿರ್ಗಮಿಸುವುದನ್ನು ಬಲವಂತವಾಗಿ ತಡೆದ ಆರೋಪದಲ್ಲಿ ಮೂವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದರಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 2ರಂದು ಪ.ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿ ಮಹಿಳೆಯೋರ್ವರು ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲಿ ಪ.ಬಂಗಾಳದಲ್ಲಿ ಪ್ರಕರಣ ಭಾರೀ ಸದ್ದು ಮಾಡಿದೆ. ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ, ನಾವು ದೂರು ಸ್ವೀಕರಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ. ಕಾನೂನು ತಜ್ಞರೊಂದಿಗೆ ಈ ವಿಷಯದ ಬಗ್ಗೆ ಸಮಾಲೋಚಿಸುತ್ತಿದ್ದೇವೆ ಎಂದು ಹೇಳಿದ್ದರು. ಇದಾದ ಬಳಿಕ ಪೊಲೀಸರು ತನಿಖೆಗೆ ಸಮಿತಿಯನ್ನು ರಚಿಸಿದ್ದರು. ಇದರ ಬೆನ್ನಲ್ಲಿ ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ರಾಜ್ಯಪಾಲರು ನಿಷೇಧ ವಿಧಿಸಿದ್ದರು. ತನ್ನ ವಿರುದ್ಧ ಸಾರ್ವಜನಿಕ ಹೇಳಿಕೆಯನ್ನು ನೀಡಿದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರಿಗೂ ನಿಷೇಧವನ್ನು ಹೇರಿದ್ದರು.
ರಾಜಭವನ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿತ್ತು, ಭಾರತದ ಸಂವಿಧಾನದ 361(2) ಮತ್ತು (3)ರ ಪ್ರಕಾರ, ಭಾರತದ ರಾಷ್ಟ್ರಪತಿ ಮತ್ತು ಯಾವುದೇ ರಾಜ್ಯದ ರಾಜ್ಯಪಾಲರು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಯಿಂದ ಸಾಂವಿಧಾನಿಕ ವಿನಾಯಿತಿಯನ್ನು ಅನುಭವಿಸುತ್ತಾರೆ. ಆದ್ದರಿಂದ ರಾಜ್ಯ ಸರಕಾರವು ರಾಜ್ಯಪಾಲರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿತ್ತು.
ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲವೂ ಹೊರಬಿದ್ದಿಲ್ಲ, ನನಗೆ ಪೆನ್ ಡ್ರೈವ್ ಸಿಕ್ಕಿದೆ. ಆನಂದ ಬೋಸ್ ರಾಜೀನಾಮೆ ನೀಡಬೇಕು, ನಾನು ರಾಜಭವನಕ್ಕೆ ಹೋಗುವುದಿಲ್ಲ ಮತ್ತು ಬೋಸ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದರು.