ಬಂಗಾಳಕ್ಕೆ ಅಪ್ಪಳಿಸಲಿರುವ ರೆಮಲ್ ಚಂಡಮಾರುತ
ಕೊಲ್ಕತ್ತಾ : ರೆಮಲ್ ಚಂಡಮಾರುತ ಇಂದು ರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದ್ದು, ಭೂಕುಸಿತ ಉಂಟಾಗುವ ನಿರೀಕ್ಷೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪೂರ್ವ ಮತ್ತು ಆಗ್ನೇಯ ರೈಲ್ವೆಗಳು ಪಶ್ಚಿಮ ಬಂಗಾಳದಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಿದರೆ, ಕೋಲ್ಕತ್ತಾ ವಿಮಾನ ನಿಲ್ದಾಣವು ಸೋಮವಾರ ಬೆಳಗಿನವರೆಗೆ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಸೇರಿದಂತೆ ಕನಿಷ್ಠ 394 ವಿಮಾನಗಳನ್ನು ರದ್ದು ಮಾಡಲಾಗಿದೆ. ಈ ನಡುವೆ ವಿಪತ್ತು ನಿರ್ವಹಣಾ ತಂಡಗಳು ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡುತ್ತಿದೆ. ಇನ್ನು ವಿಮಾನ ರದ್ದು ಮಾಡಿರುವ ಬಗ್ಗೆ ಇಮೇಲ್ ಅಥವಾ ನೋಂದಾಯಿತ ಫೋನ್ ಸಂಖ್ಯೆಯ ಮೂಲಕ ವಿಮಾನಯಾನ ಸಂಸ್ಥೆಗಳು ನಮಗೆ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಕೆಲವು ಪ್ರಯಾಣಿಕರು ವಿಮಾನಯಾನ ಸಂಸ್ಥೆಯಿಂದ ಹೋಟೆಲ್ ವೆಚ್ಚ ಮತ್ತು ಆಹಾರ ಭತ್ಯೆಯ ಆಗ್ರಹ ಮಾಡಿದ್ದಾರೆ. ಅಧಿಕಾರಿಗಳು ಪಶ್ಚಿಮ ಬಂಗಾಳದ ದಿಘಾ ಬೀಚ್‌ನಿಂದ ಪ್ರವಾಸಿಗರನ್ನು ತುರ್ತು ಸ್ಥಳಾಂತರ ಮಾಡಿದ್ದಾರೆ. ಇನ್ನು ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಮತ್ತು ಸುಂದರಬನ್ಸ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಬಕ್ಕಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.