ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 46 ಸಾವು

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 46 ಸಾವು

ಢಾಕಾ, ಮಾ. 1: ಬಾಂಗ್ಲಾದೇಶದ ರಾಜಧಾನಿ ಢಾಕಾದ ಬೈಲಿ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಗುರುವಾರ ರಾತ್ರಿ ಭೀಕರ ಬೆಂಕಿ ಅನಾಹುತ ಸಂಭವಿಸಿದ್ದು, 46 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಲವು ರೆಸ್ಟೋರೆಂಟ್‌ಗಳು ಇದ್ದ ಏಳು ಅಂತಸ್ತಿನ ಗ್ರೀನ್ ಕೋಝಿ ಕಾಟೇಜ್‌ ಎಂಬ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ರಕ್ಷಣಾ ಕಾರ್ಯಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ ಒಟ್ಟು 70 ಜನರನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ನಡೆದ ತಕ್ಷಣ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್, ಢಾಕಾ-8ರ ಶಾಸಕ ಎಎಫ್‌ಎಂ ಬಹಾವುದ್ದೀನ್ ನಾಸಿಮ್ ಮತ್ತು ಹಿರಿಯ ಕಾನೂನು ಜಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ತಡರಾತ್ರಿ 2 ಗಂಟೆಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸೇನ್, ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 33 ಜನರು ಮೃತಪಟ್ಟಿದ್ದಾರೆ. ಶೇಖ್ ಹಸೀನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಅಂಡ್ ಪ್ಲಾಸ್ಟಿಕ್ ಸರ್ಜರಿ ಆಸ್ಪತ್ರೆಯಲ್ಲಿ 10 ಸಾವುಗಳು ಸಂಭವಿಸಿವೆ ಎಂದಿದ್ದರು. ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಅವರು ಸೆಂಟ್ರಲ್ ಪೊಲೀಸ್ ಆಸ್ಪತ್ರೆಯಲ್ಲಿ ಮತ್ತೊಂದು ಸಾವು ಸಂಭವಿಸಿರುವುದನ್ನು ದೃಢಪಡಿಸಿದ್ದರು. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 44 ಆಗಿತ್ತು. ಈಗ ಅದು 46ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ಚೌಧರಿ ಅಬ್ದುಲ್ಲಾ ಅಲ್ ಮಾಮುನ್, 75 ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಕೆಲವರು ಪ್ರಥಮ ಚಿಕಿತ್ಸೆ ಪಡೆದು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದ್ದಾರೆ. ಅಗ್ನಿಶಾಮಕ ದಳದದ ಸಿಬ್ಬಂದಿ ರಾತ್ರಿ 12:30 ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಹೆಚ್ಚಿನವರು ಘಟನೆ ನಡೆದಾಗ ಕಟ್ಟಡದಿಂದ ಜಿಗಿದು, ಸುಟ್ಟ ಗಾಯಗಳಿಂದ ಮತ್ತು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Previous Post
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ
Next Post
ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

Recent News