ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ ಜಾಮೀನು ಅರ್ಜಿ ವಿಚಾರಣೆ ವೇಳೆ ವಕೀಲ ಸಿಂಘ್ವಿ ಗಂಭೀರ ಆರೋಪ
ಇಡಿ ಅದೊಂದು ತನಿಖಾ ಸಂಸ್ಥೆಯಂತೆ ವರ್ತಿಸುತ್ತಿಲ್ಲ ಬದಲಿಗೆ ಶೋಷಣೆಯ ಏಜೆನ್ಸಿಯಂತೆ ವರ್ತಿಸುತ್ತಿದೆ
ನವದೆಹಲಿ : ಜಾರಿ ನಿರ್ದೇಶನಾಲಯ ಅದೊಂದು ತನಿಖಾ ಸಂಸ್ಥೆಯಂತೆ ವರ್ತಿಸುತ್ತಿಲ್ಲ ಬದಲಿಗೆ ಶೋಷಣೆಯ ಏಜೆನ್ಸಿಯಂತೆ ವರ್ತಿಸುತ್ತಿದೆ. ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ ಎಂದು ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದಾರೆ. ಬಿಆರ್‌ಎಸ್ ಪಕ್ಷದ ನಾಯಕಿ, ತೆಲಂಗಾಣ ಪರಿಷತ್ ಸದಸ್ಯೆ ಕೆ.ಕವಿತಾ ಜಾಮೀನು ಅರ್ಜಿ ವಿಚಾರಣೆ ವೇಳೆ ಸಿಂಘ್ವಿ ಇಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಕಳೆದ ತಿಂಗಳು ಬಂಧಿತರಾಗಿರುವ ಕೆ.ಕವಿತಾ ಜಾಮೀನು ಕೋರಿ ರೋಸ್ ಅವೆನ್ಯೂ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ವೇಳೆ ಕೆ.ಕವಿತಾ ಪ್ರತಿನಿಧಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಇಡಿಯಲ್ಲಿ ಯಾವುದೇ ನ್ಯಾಯವಿಲ್ಲ, ತನಿಖೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಇದೊಂದು ಬೆಕ್ಕು ಇಲಿಯ ಆಟವಾಗಿದೆ, ಸಮನ್ಸ್ ಎಂಬುವುದು ಸೇಬು ಹಣ್ಣಿನ ರೀತಿಯಾಗಿದೆ. ದಿನಾ ಒಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವಂತೆ ಇಡಿ ದಿನಾ ಒಂದು ಸಮನ್ಸ್ ಜಾರಿ ಮಾಡುತ್ತಿದೆ ಎಂದು ವ್ಯಂಗ್ಯ ಮಾಡಿದರು.
ಸಿಂಘ್ವಿ ವಾದಕ್ಕೆ ಇಡಿ ಪರ ವಿಶೇಷ ವಕೀಲ ಜೋಹೆಬ್ ಹೊಸೈನ್ ಅಕ್ಷೇಪ ವ್ಯಕ್ತಪಡಿಸಿದರು. ಸಿಂಘ್ವಿ ಅವರು ಮಧ್ಯಂತರ ಜಾಮೀನಿಗಾಗಿ ವಾದಿಸುತ್ತಿದ್ದಾರೋ ಅಥವಾ ನಿಯಮಿತವಾಗಿ ವಾದಿಸುತ್ತಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವೇಳೆ ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸಿ ಇಡಿ ಸಲ್ಲಿಸಿದ್ದ ಉತ್ತರವನ್ನು ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರಿಗೆ ಹಸ್ತಾಂತರಿಸಲಾಯಿತು. ಏಪ್ರೀಲ್ 4 ಕ್ಕೆ ವಿಚಾರಣೆ ಮುಂದೂಡಿಕೆಯಾಯಿತು.