ಬಿಜೆಪಿಗೆ ‘ಸೈನಿಕ’ನ ಶಾಕ್, ಮುನಿಯಪ್ಪ ಮುನಿಸಿಗೆ ಮದ್ದು

ಬಿಜೆಪಿಗೆ ‘ಸೈನಿಕ’ನ ಶಾಕ್, ಮುನಿಯಪ್ಪ ಮುನಿಸಿಗೆ ಮದ್ದು

ರಾಜಕೀಯದಲ್ಲಿ ಯಾವಾಗಲೂ ಅನಿರೀಕ್ಷಿತ ಬೆಳೆವಣಿಗೆಗಳೇ ಹೆಚ್ಚು ಕುತೂಹಲಕಾರಿಯಾಗಿರೋದು. ಈಗ ನೋಡಿ. ಇಡೀ ಕರ್ನಾಟಕದಲ್ಲಿ ಅತ್ಯಂತ ಕುತೂಹಲಕಾರಿಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಮಹತ್ತರವಾದ ತಿರುವು ಪಡೆದುಕೊಳ್ಳುವ ಸಾಧ್ಯತೆ ಕಾಣಿಸಿಕೊಳ್ಳುತ್ತಿದೆ. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಕುತೂಹಲಕಾರಿ ವಿದ್ಯಮಾನಗಳು ಜರುಗುವ ಸುಳಿವು ಸಿಗುತ್ತಿವೆ. ಮಾಜಿ ಸಚಿವ ಹಾಗೂ ಬಿಜೆಪಿ ಸರ್ಕಾರದಿಂದಲೇ ವಿಧಾನ ಪರಿಷತ್ ಗೆ ನಾಮ ನಿರ್ದೇಶನಗೊಂಡಿರುವ ಸಿ.ಪಿ. ಯೋಗೀಶ್ವರ್ ಪುತ್ರಿ, ಚಿತ್ರನಟಿ ನಿಶಾ ಯೋಗೀಶ್ವರ್ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.
ಒಂದೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಲ್ಲಿ ಗೆದ್ದರೆ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿ ಆಗುತ್ತೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಕೆ ಶಿವಕುಮಾರ್ ಮತ್ತು ಸಿ.ಪಿ. ಯೋಗೇಶ್ವರ್ ಒಂದು ಹಂತದ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್ ಅವರೇ ಮುಂದಿನ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಂತ ಹೇಳಲಾಗುತ್ತಿತ್ತು. ಆದರೀಗ ‘ಕಹಾನಿ ಮೇ ಟ್ವಿಸ್ಟ್’ ಎನ್ನುವ ರೀತಿಯಲ್ಲಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮಗಳನ್ನು ಕಣಕ್ಕಿಳಿಸುತ್ತಾರೆ. ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡುವುದರಿಂದ ‘ಯೂತ್ ವರ್ಸಸ್ ಯೂತ್’ ಚುನಾವಣೆ ಮಾಡಲು ಸಿ.ಪಿ. ಯೋಗೀಶ್ವರ್ ತಮ್ಮ ಪುತ್ರಿ, ಚಿತ್ರನಟಿ ನಿಶಾ ಯೋಗೀಶ್ವರ್ ಅವರನ್ನು ಕಣಕ್ಕಿಳಿಸಲಿದ್ದಾರೆ ಎನ್ನುವ ಮಾಹಿತಿಗಳಿವೆ. ಅಂದಹಾಗೆ ನಿಶಾ ಯೋಗೀಶ್ವರ್ ಬಹುತೇಕ ಏಪ್ರಿಲ್ ಮೊದಲ ವಾರದಲ್ಲೇ ಕಾಂಗ್ರೆಸ್ ಸೇರ್ಪಡೆ ಆಗುತ್ತಾರಂತೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಮತ್ತು ಸಿ.ಎನ್ ಮಂಜುನಾಥ್ ಸ್ಪರ್ಧೆಯ ಕಾರಣಕ್ಕೆ ಕುತೂಹಲ ಮೂಡಿತ್ತು. ಇದಾದ ಮೇಲೆ ಡಿಕೆ ಬ್ರದರ್ಸ್ ಮತ್ತು ಎಚ್.ಡಿ. ಕುಮಾರಸ್ವಾಮಿ ಸಮಾನ ಶತ್ರುವಾಗಿರುವುದರಿಂದ ಸಿ.ಪಿ. ಯೋಗೀಶ್ವರ್ ಯಾರನ್ನು ಬೆಂಬಲಿಸುತ್ತಾರೆ ಎನ್ನುವ ಕುತೂಹಲ ಹುಟ್ಟುಕೊಂಡಿತ್ತು. ಇತ್ತೀಚೆಗೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಯೋಗೀಶ್ವರ್ ಈ ಬಾರಿ ‘ಡಿಕೆ ಸುರೇಶ್ ಅವರನ್ನು ಸೋಲಿಸುತ್ತೇನೆ’ ಎಂದು ಹೇಳಿದ್ದಾಗ ಕುತೂಹಲ ಕಾಡಿಮೆಯಾಗಿತ್ತು. ಇದೀಗ ಸಿ.ಪಿ. ಯೋಗೀಶ್ವರ್ ಅವರ ಪುತ್ರಿ ನಿಶಾ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನಿಶಾ ಯೋಗೇಶ್ವರ್, ಡಿ.ಕೆ.ಸೋದರರ ಸಂಪರ್ಕದಲ್ಲಿದ್ದು ಕಾಂಗ್ರೆಸ್ ಸೇರುವ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.
ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಯೋಗೀಶ್ವರ್ ಎದುರಾಳಿಗಳಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಒಂದಾಗಿ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ, ಹೊಂದಾಗಿರುತ್ತಾರೆ ಎನ್ನುವ ಚರ್ಚೆಯ ನಡುವೆ ನಿಶಾ ಕಾಂಗ್ರೆಸ್ ಸೇರ್ಪಡೆ ಸುದ್ದಿ ಬಿಜೆಪಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ಇದೀಗ ಚನ್ನಪಟ್ಟಣದಲ್ಲಿ ನಿಶಾ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯಲ್ಲಿ ಲಾಭ ಆಗಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ.
ಮುನಿಯಪ್ಪ ಮುನಿಸಿಗೆ ಮದ್ದು
ಅಳೆದು ತೂಗಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಈ ವಿಚಾರದಲ್ಲಿ ತುಸು ಹಿನ್ನಡೆ ಆಗಿರುವಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಮುನಿಯಪ್ಪನವರ ಕೋಪ ತಣಿಸುವ ಕಾರ್ಯಕ್ಕೆ ಹೈಕಮಾಂಡ್ ಕೈ ಹಾಕಿದೆ.
ಕೋಲಾರ ಟಿಕೆಟ್ ಆಯ್ಕೆ ವಿಚಾರದಲ್ಲಿ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ಸಚಿವ ಮುನಿಯಪ್ಪ ಅವರು ಗೆಲ್ಲುವ ತಂತ್ರಗಾರಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಎಸ್‌ಸಿ ಎಡ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಕೋಲಾರ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನೂ ಕೇಳಿದ್ದೀವಿ. ಕೇಂದ್ರ ಚುನಾವಣಾ ಸಮಿತಿ ಯಾವುದೇ ಅಭ್ಯರ್ಥಿ ಆಯ್ಕೆ ಮಾಡಿದರೂ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಪಾರ್ಟಿ ತೀರ್ಮಾನಕ್ಕೆ ಬದ್ಧರಾಗಿ ಇರುತ್ತೇವೆ ಎಂದು ಹೇಳಿದ್ದಾರೆ. 7 ಬಾರಿ ಸಂಸದರಾಗಿರುವ ಮುನಿಯಪ್ಪ ಕೂಡ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಒಟ್ಟಿಗೆ ಚುನಾವಣಾ ನಡೆಸಿ ಅಭ್ಯರ್ಥಿಯನ್ನ ಗೆಲ್ಲಿಸುವ ಅಭಿಪ್ರಾಯ ಹೊಂದಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪೋಸ್ಟ್ ಮಾಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ ಸುರ್ಜೇವಾಲ ಅವರು ಮುನಿಯಪ್ಪ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಮುನಿಸು ಮರೆಸಲು ಬೆವರು ಹರಿಸುತ್ತಿದ್ದಾರಂತೆ.
ಅಬಕಾರಿ ನೀತಿ ಆರೋಪಿ ತಂದೆಗೆ ಎನ್‌ಡಿಎ ಟಿಕೆಟ್‌
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಕಾರಣವಾದ ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿ, ಬಳಿಕ ಅನುಮೋದಕನಾಗಿದ್ದ ರಾಘವ ಮಾಗುಂಟ ರೆಡ್ಡಿಯ ತಂದೆ ಮಾಗುಂಟ ಶ್ರೀನಿವಾಸುಲು ರೆಡ್ಡಿಗೆ ಎನ್‌ಡಿಎ ಟಿಕೆಟ್‌ ನೀಡಲಾಗಿದೆ. ಮಾಗುಂಟ ಶ್ರೀನಿವಾಸುಲು ರೆಡ್ಡಿ ಆಂಧ್ರಪ್ರದೇಶದ ಪ್ರಮುಖ ಬಿಜೆಪಿ ಮಿತ್ರ ಪಕ್ಷವಾದ ತೆಲುಗು ದೇಶಂ ಪಕ್ಷದಿಂದ ಲೋಕಸಭೆ ಟಿಕೆಟ್ ಪಡೆದಿದ್ದಾರೆ.
ಇದೇ ಫೆಬ್ರವರಿ 28ರಂದು ತಂದೆ-ಮಗ ಇಬ್ಬರೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಟಿಡಿಪಿಗೆ ಸೇರಿದ ನಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ಒಂಗೋಲ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಶ್ರೀನಿವಾಸುಲು ಈ ಬಾರಿ ತಮ್ಮ ಮಗನಿಗೆ ಟಿಕೆಟ್ ನೀಡಬೇಕೆಂದು ಬಯಸಿದ್ದರು. ಆದರೆ ಅಬಕಾರಿ ನೀತಿ ಪ್ರಕರಣದಿಂದಾಗಿ ಮತ್ತೆ ಅಪ್ಪನೇ ಅಖಾಡಕ್ಕೆ ಇಳಿಯುವಂತಾಯಿತು. ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಪಕ್ಷ ಮತ್ತು ಬಿಜೆಪಿ ಒಳಗೊಂಡಿರುವ ಎನ್‌ಡಿಎ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ದೆಹಲಿ ನ್ಯಾಯಾಲಯದಲ್ಲಿ ಕೇಜ್ರಿವಾಲ್ ಅವರು ಹೇಳಿಕೆಯಲ್ಲಿ ತಂದೆ-ಮಗ ಇಬ್ಬರ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಅಲ್ಲಿ ಶ್ರೀನಿವಾಸುಲು ತನ್ನ ಮಗನನ್ನು ಫೆಬ್ರವರಿ 2023ರಲ್ಲಿ ಬಂಧಿಸಿದಾಗ ನನ್ನ ವಿರುದ್ಧ ಬಲವಂತವಾಗಿ ಹೇಳಿಕೆ ನೀಡಿದ್ದಾರೆ. ಆ ಬಳಿಕ ರಾಘವ ಅವರು ಅಕ್ಟೋಬರ್ 2023ರಲ್ಲಿ ಪ್ರಕರಣದಲ್ಲಿ ಅನುಮೋದಕರಾದ ನಂತರ ಅವರಿಗೆ ಜಾಮೀನು ನೀಡಲಾಗಿದೆ. ಇದರ ನಂತರ ಕೆ. ಕವಿತಾ ಅವರು ಮಾಗುಂಟ ಶ್ರೀನಿವಾಸುಲು ರೆಡ್ಡಿಗೆ ಕರೆ ಮಾಡಿ ಭೇಟಿಯಾಗುವಂತೆ ಹೇಳಿದ್ದಾರೆ. ಮರುದಿನ ಶ್ರೀನಿವಾಸಲು ರೆಡ್ಡಿ ಹೈದರಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ಕವಿತಾ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಆ ಸಭೆಯಲ್ಲಿ ಕವಿತಾ ಅವರು ಅರವಿಂದ್ ಕೇಜ್ರಿವಾಲ್ ತಮ್ಮೊಂದಿಗೆ ಮಾತನಾಡಿ 100 ಕೋಟಿ ನೀಡುವಂತೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ಅದರಂತೆ ಶ್ರೀನಿವಾಸಲು ರೆಡ್ಡಿ ಅವರಿಗೆ 50 ಕೋಟಿ ರೂ. ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ ಎಂದು ಇಡಿ ಆರೋಪಿಸಿದೆ. ರಾಘವ ರೆಡ್ಡಿ ತಮ್ಮ ತಂದೆ ಮತ್ತು ಕೆ. ಕವಿತಾ ನಡುವಿನ ಒಪ್ಪಂದದ ಪ್ರಕಾರ ಕವಿತಾ ಸಹಚರರಿಗೆ 25 ಕೋಟಿ ರೂಪಾಯಿ ನಗದು ಪಾವತಿಸಿದ್ದಾರೆ ಎಂದು ಇಡಿಗೆ ತಿಳಿಸಿದ್ದಾರೆ.

Previous Post
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ ಬಿಜೆಪಿ
Next Post
ಕೇಜ್ರಿವಾಲ್ ಬಂಧನದಿಂದ ಬಿಜೆಪಿಗೆ ವಿಶ್ವದಾದ್ಯಂತ ಅವಮಾನ: ಅಖಿಲೇಶ್

Recent News