ಬಿಜೆಪಿಯವರು ನೂರು ಜನ್ಮ ಎತ್ತಿ ಬಂದರೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬಿಜೆಪಿಯವರು ನೂರು ಜನ್ಮ ಎತ್ತಿ ಬಂದರೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು, ಆ. 14: “ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು. “ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗೆ 10 ಹೆಚ್.ಪಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ ಜಾರಿಗೆ ಬಂದಿತು. ಇದರಲ್ಲಿ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಲಾಗಿದೆಯೇ? ಬಡವರಿಗೆ ನಿವೇಶನ, ಮನೆ ನೀಡುವ ಯೋಜನೆ ನಿಂತಿದೆಯೇ? ಇಲ್ಲ. ಅದೇ ರೀತಿ ಬಿಜೆಪಿಯವರು ನೂರು ಜನ್ಮ ತಳೆದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ವಾಗ್ದಾಳಿ ನಡೆಸಿದರು. “ಪದ್ಮನಾಭನಗರದಲ್ಲಿ ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ ಸ್ಫೂರ್ತಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಂದಿದ್ದು ಯಾಕೆ? ಇವುಗಳ ಅವಶ್ಯಕತೆ ಏನು ಎಂಬುದು ಪ್ರಮುಖವಾದ ವಿಚಾರವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ರಾಜಕಾರಣ ಎಂದ ಮೇಲೆ ಗೆಲುವು, ಸೋಲು ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚಿಸುತ್ತದೆ. ಜನರ ಬದುಕು ಕಟ್ಟುವ ಕೆಲಸ ಮಾಡುತ್ತದೆ. ಬಿಜೆಪಿಯವರು ದೇವರು, ಧರ್ಮ, ಜಾತಿ ಆಧಾರವಾಗಿ, ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ.

 

ಮಾಧ್ಯಮಗಳ ವರದಿ ಸುಳ್ಳು: ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕು ಎಂದು ಸಚಿವರು ಮನವಿ ಮಾಡಿರುವ ಬಗ್ಗೆ ಮಾಧ್ಯಮ ವರದಿ ಬಗ್ಗೆ ಗಮನ ಸೆಳೆದಾಗ, “ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು.ಪಕ್ಷದ ಅಧ್ಯಕ್ಷನಾದ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳನ್ನು ಬದಲಿಸುವ ಅಥವಾ ಕತ್ತರಿ ಹಾಕುವ ಉದ್ದೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದಾಯ ಹೆಚ್ಚಾಗಿರುವವರು, ತೆರಿಗೆ ಪಾವತಿದಾರರು ಕೂಡ ಈ ಯೋಜನೆ ಪಡೆಯುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳ ಪರಿಶೀಲನೆ ಮಾಡಲಾಗುವುದು. ಈ ಫಲಾನುಭವಿಗಳ ಗುರುತಿನ ಚೀಟಿ ವಿತರಣೆಗೆ ನಾವು ಆಲೋಚನೆ ನಡೆಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಈ ವಿಚಾರವಾಗಿ ಪರಿಶೀಲನೆ ಮಾಡಲಿದೆ. ನಮ್ಮ ಬಜೆಟ್ ನಲ್ಲಿ ಈ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕೊರತೆಯಾಗಿದೆ ಎಂದು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು, ನಮ್ಮ ಸರ್ಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅಸೂಯೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಯಾವ ಸಚಿವರು ಹೇಳಿಲ್ಲ. ಅದೆಲ್ಲವೂ ಸುಳ್ಳು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಮ್ಮ ರಾಜ್ಯದ ಬಜೆಟ್ ಪ್ರಮಾಣ 26 ಸಾವಿರ ಕೋಟಿ ಇತ್ತು. ಈಗ ಅದು 3.71 ಲಕ್ಷ ಕೋಟಿಗೆ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವಿದೆ” ಎಂದು ಸ್ಪಷ್ಟಪಡಿಸಿದರು. ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, “ಈ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಪರಿಶೀಲನೆ ಮಾಡಿ ಸರಿಪಡಿಸಲಿದ್ದಾರೆ” ಎಂದು ತಿಳಿಸಿದರು.

Previous Post
ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಮೋದಿ ಭಾಷಣ, ಕೆಂಪುಕೋಟೆಯ ಸುತ್ತ ಹದ್ದಿನ ಕಣ್ಣು
Next Post
ಸಿಎಎ ನಿರಾಶ್ರಿತರಿಗೆ ನ್ಯಾಯ ಮತ್ತು ಹಕ್ಕು ನೀಡಿದೆ – ಅಮಿತ್ ಶಾ

Recent News