ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮತ್ತೊಬ್ಬ ಸಂಸದ: 3 ದಿನದೊಳಗೆ ಮೂವರು ರಾಜೀನಾಮೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮತ್ತೊಬ್ಬ ಸಂಸದ: 3 ದಿನದೊಳಗೆ ಮೂವರು ರಾಜೀನಾಮೆ

ನವದೆಹಲಿ, ಮಾ. 11: ರಾಜಸ್ಥಾನದ ಚುರು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಕಸ್ವಾನ್ ಸೋಮವಾರ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಸ್ವಾನ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಬರಮಾಡಿಕೊಂಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ಸೇರ್ಪಡೆಯಾದ ಕಸ್ವಾನ್ “ಪಕ್ಷದಲ್ಲಿ(ಬಿಜೆಪಿ) ನನ್ನ ‘ಧ್ವನಿ ಕೇಳುತ್ತಿಲ್ಲ’ ಎಂದು ಭಾವಿಸಿದ್ದೇನೆ. ರೈತ ಸಹೋದರರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಲಾಗದೆ ನನಗೆ ಬಿಜೆಪಿಯಲ್ಲಿ ಉಸಿರುಗಟ್ಟಿದ ಪರಿಸ್ಥಿತಿ ಉಂಟಾಗಿತ್ತು ಎಂದಿದ್ದಾರೆ.

ಕಸ್ವಾನ್ ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಅಧಿಕಾರದ ವಿರುದ್ಧ ಹೋರಾಡಿದ ಇಂತವರು ನಮ್ಮ ಪಕ್ಷಕ್ಕೆ ಬೇಕು. ಪಾಳೆಗಾರಿಗೆ ವಿರುದ್ಧ ಹೋರಾಡಿದ ಮತ್ತು ರೈತರನ್ನು ಬೆಂಬಲಿಸಿದ ಕಸ್ವಾನ್ ಅವರ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಎರಡು ಬಾರಿ ಸಂಸದರಾಗಿದ್ದ ಕಸ್ವಾನ್ ಅವರ ಬದಲಿಗೆ ರಾಜಸ್ಥಾನದ ಚುರು ಲೋಕಸಭಾ ಕ್ಷೇತ್ರದಿಂದ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಜಾರಿಯಾ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಇದು ಕಸ್ವಾನ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಗೆ 195 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಕಳೆದ ಮೂರು ದಿನದ ಅವಧಿಯಲ್ಲಿ ಮೂವರು ಸಂಸದರು ರಾಜೀನಾಮೆ ಕೊಟ್ಟಿದ್ದಾರೆ. ಮಾರ್ಚ್‌ 9ರಂದು ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಕುನಾರ್ ಹೆಂಬ್ರಮ್ ವೈಯುಕ್ತಿಕ ಕಾರಣ ನೀಡಿ ಸಂಸದ ಸ್ಥಾನ ಮತ್ತು ಬಿಜೆಪಿ ಪಕ್ಷಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರು ಇನ್ನೂ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. “ನಾನು ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಮುಂದಿನ ದಿನಗಳನ್ನು ಪುಸ್ತಕಗಳನ್ನು ಬರೆಯುತ್ತಾ ಮತ್ತು ಸಾಮಾಜಿಕ ಸೇವೆಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.
ಮಾರ್ಚ್‌ 10 ರಂದು ಹರಿಯಾಣದ ಹಿಸಾರ್ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಂದ್ರ ಸಿಂಗ್ ಬಿಜೆಪಿ ತೊರೆದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆ, ಅಗ್ನಿವೀರ್ ಯೋಜನೆ ಮತ್ತು ದೇಶದ ಮಹಿಳಾ ಕುಸ್ತಿಪಟುಗಳ ವಿಷಯಗಳಲ್ಲಿ ಬಿಜೆಪಿಯ ನಿಲುವಿನ ಕುರಿತು ಅಸಮಾಧಾನಗೊಂಡು ಪಕ್ಷ ತೊರೆದಿದ್ದೇನೆ ಎಂದು ಹೇಳಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಿಸಾರ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬ್ರಿಜೇಂದ್ರ ಸಿಂಗ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಬ್ಬರು ಸಂಸದರ ರಾಜೀನಾಮೆ ಬಳಿಕ ಸೋಮವಾರ ಮೂರನೇ ಸಂಸದ ರಾಹುಲ್ ಕಸ್ವಾನ್ ಬಿಜೆಪಿಗೆ ತೊರೆದಿದ್ದಾರೆ.

Previous Post
ಸಂವಿಧಾನ ಬದಲಾವಣೆ- ಆರ್‌ಎಸ್‌ಎಸ್‌ ಪ್ರತಿಜ್ಞೆ: ಪ್ರಕಾಶ್ ಅಂಬೇಡ್ಕರ್
Next Post
ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ನೂತನ ಚುನಾವಣಾ ಆಯುಕ್ತರ ನೇಮಕ ವಿಷಯ

Recent News