ಬಿಜೆಪಿ ನಾಯಕಿ ಜಯಪ್ರದಾ ಬಂಧನಕ್ಕೆ ಸೂಚಿಸಿದ ಕೋರ್ಟ್‌

ಬಿಜೆಪಿ ನಾಯಕಿ ಜಯಪ್ರದಾ ಬಂಧನಕ್ಕೆ ಸೂಚಿಸಿದ ಕೋರ್ಟ್‌

ರಾಂಪುರ, ಫೆ, 14: ಉತ್ತರಪ್ರದೇಶದ ರಾಂಪುರದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯವು ರಾಜ್ಯಸಭಾ ಮಾಜಿ ಸಂಸದೆ, ಬಿಜೆಪಿ ನಾಯಕಿ ಮತ್ತು ನಟಿ ಜಯಪ್ರದಾ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರಿಂದ ಅವರನ್ನು ಬಂಧಿಸುವಂತೆ ರಾಂಪುರ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.
ಜಯಪ್ರದಾ ವಿರುದ್ಧ ಹೊರಡಿಸಲಾದ ಏಳನೇ ವಾರಂಟ್ ಇದಾಗಿದ್ದು, ಅವರನ್ನು ಬಂಧಿಸುವಂತೆ ರಾಂಪುರ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. 2019ರಿಂದ ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು
ಒಂದು ಪ್ರಕರಣ ಅವರ ಲೋಕಸಭಾ ಕ್ಷೇತ್ರವಾದ ರಾಂಪುರದ ಸ್ವರ್ ಪ್ರದೇಶದಲ್ಲಿ ದಾಖಲಾಗಿತ್ತು. ಏಪ್ರಿಲ್ 19,2019 ರಂದು ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸ್ವರ್ ಪ್ರದೇಶದ ನೂರ್‌ಪುರ ಗ್ರಾಮದಲ್ಲಿ ರಸ್ತೆ ಉದ್ಘಾಟಿಸಿದ ಆರೋಪ ಅವರ ಮೇಲಿದೆ. ಮತ್ತೊಂದು ಪಿಪ್ಲಿಯಾ ಮಿಶ್ರಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಮ್ರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಯಪ್ರದಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಜಯಪ್ರದಾ ಅವರಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅವರು ಇದುವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ.
ನ್ಯಾಯಾಲಯವು ಜಯಪ್ರದಾ ಅವರಿಗೆ ಹೇಳಿಕೆಯನ್ನು ನೀಡಲು ಹಲವು ದಿನಾಂಕಗಳನ್ನು ನಿಗದಿಪಡಿಸಿದೆ ಆದರೆ ಅವರು ಪ್ರತಿ ಬಾರಿಯೂ ಹಾಜರಾಗಲು ವಿಫಲರಾದರು ನಂತರ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಮಂಗಳವಾರವೂ ಜಯಪ್ರದಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ, ನಂತರ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.

Previous Post
ಶೆಹಬಾಝ್ ಷರೀಫ್ ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿ
Next Post
ಭಾರತ್ ಜೋಡೊ ನ್ಯಾಯ ಯಾತ್ರೆ ರದ್ದು: ರೈತ ಪ್ರತಿಭಟನೆಯತ್ತ ರಾಹುಲ್ ಗಾಂಧಿ

Recent News