ಬಿಜೆಪಿ ಸರ್ಕಾರದಲ್ಲಿ 1,140 ಕೋಟಿ ನಷ್ಟ: ಸಚಿವರಿಂದಲೇ ಆರೋಪ
ಜೈಪುರ, ಮೇ 18: ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರಕಾರ ರಾಜಸ್ಥಾನದಲ್ಲಿ ಅಧಿಕಾರದಲ್ಲಿದೆ.
ಹಿರಿಯ ನ್ಯಾಯಾಧೀಶರು ಮತ್ತು ಐಎಎಸ್ ಅಧಿಕಾರಿಗಳ ನಿವಾಸಗಳಿಗೆ ಜೈಪುರದ ಗಾಂಧಿನಗರದಲ್ಲಿ ವಸತಿ ಸಂಕೀರ್ಣ ಯೋಜನೆಯಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ನಷ್ಟವುಂಟಾಗಲಿದೆಯೆಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಆಪಾದಿಸಿದ್ದಾರೆ. ಮುಖ್ಯಮಂತ್ರಿಯವರ ಅಧೀನದಲ್ಲಿರುವ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಕ್ಯಾಬಿನೆಟ್ ಅನುಮತಿಯಿಲ್ಲದೆ ಯೋಜನೆಯನ್ನು ಮುಂದುವರಿಸುತ್ತಿದೆ ಎಂದು ಮೀನಾ ಹೇಳಿದ್ದು, ಯೋಜನೆಗೆ ತಡೆ ನೀಡಬೇಕು ಮತ್ತು ಈ ಕುರಿತ ಫೈಲ್‌ನ್ನು ವಾಪಾಸ್ಸು ತರಿಸುವಂತೆ ಸಿಎಂಗೆ ಆಗ್ರಹಿಸಿದ್ದಾರೆ.
ಸಾಮಾನ್ಯ ಆಡಳಿತ ಇಲಾಖೆ ಗಾಂಧಿನಗರದಲ್ಲಿರುವ ಹಳೆಯ ಎಂಆರ್‌ಇಸಿ ಕ್ಯಾಂಪಸ್ ಕಟ್ಟಡಗಳನ್ನು ನಾಶಪಡಿಸಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಐದು ವರ್ಷಗಳ ಹಿಂದೆ ಈ ನಿವೇಶನದ ಮೌಲ್ಯವು ರೂ.277 ಕೋಟಿಗಳಾಗಿದ್ದರೂ, ಈಗ ಅದರ ಮೌಲ್ಯವನ್ನು ಕಡಿಮೆಗೊಳಿಸಿ 218 ಕೋಟಿ ರೂ. ಎಂದು ಹೇಳಲಾಗಿದೆ. ಜಮೀನಿನ ಮೀಸಲು ಬೆಲೆಯು ಪ್ರಸಕ್ತ 25 ಸಾವಿರ ರೂ.ಗಳಾಗಿದ್ದರೂ, ಅದನ್ನು 8 ಸಾವಿರ ಚದರ ಅಡಿಗೆ ನೀಡಲಾಗಿದೆ. ಇದರಿಂದಾಗಿ ರಾಜ್ಯ ಸರಕಾರಕ್ಕೆ ಪ್ರತಿ ಚದರ ಅಡಿಗೆ 17 ಸಾವಿರ ರೂ.ನಷ್ಟವಾಗಲಿದೆ. ಈ ವಸತಿ ಸಂಕೀರ್ಣ ಯೋಜನೆಯಡಿ ರಾಜ್ಯ ಸರಕಾರವು ಮೂರನೇ ಒಂದರಷ್ಟು ಫ್ಲ್ಯಾಟ್‌ಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ಖಾಸಗಿಯವರಿಗೆ ನೀಡಲಿದೆ ಎಂದು ಮೀನಾ ತಿಳಿಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವುಂಟಾಗಲಿದೆ ಎಂದು ಮೀನಾ ಹೇಳಿದ್ದಾರೆ. ಯೋಜನೆಯ ಕಡತವನ್ನು ಕ್ಯಾಬಿನೆಟ್ ಅಥವಾ ಹಣಕಾಸು ಸಚಿವಾಲಯ ಪಾಸ್ ಮಾಡಿಲ್ಲ ಎಂದು ಹೇಳಿರುವ ಸಚಿವರು, ಅದನ್ನು ತಕ್ಷಣ ಹಿಂಪಡೆಯುವಂತೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಒತ್ತಾಯಿಸಿದ್ದಾರೆ.
ಹಿರಿಯ ಸಚಿವರಾಗಿರುವ ಕಿರೋಡಿ ಲಾಲ್ ಮೀನಾ ತಮ್ಮದೇ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ವಿರೋಧಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಅವರು ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯಡಿಯಲ್ಲಿ ಭೂಮಿಯನ್ನು ಮಾರಾಟ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಭ್ರಷ್ಟಾಚಾರದ ಸುಳಿವು ನೀಡಿದ್ದರು.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೊದಲು ಕಿರೋಡಿ ಲಾಲ್ ಮೀನಾ ಮೀನಾ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಚುನಾವಣಾ ಪ್ರಚಾರದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಕಳೆದ ವರ್ಷ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದ ಬಳಿಕ ಬಿಜೆಪಿಯು ಶಾಸಕ ಭಜನ್ ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿತ್ತು.
ಮೀನಾ ಅವರು ತಮಗೆ ನೀಡಲಾದ ಖಾತೆಗಳ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು ದೌಸಾ ಲೋಕಸಭಾ ಕ್ಷೇತ್ರದಿಂದ ತಮ್ಮ ಸಹೋದರನಿಗೆ ಟಿಕೆಟ್ ನೀಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ 25ರಲ್ಲಿ 24 ಸ್ಥಾನಗಳನ್ನು ಗೆದ್ದಿತ್ತು. ಇದು 2014ರಲ್ಲಿ ಎಲ್ಲಾ 25 ಸ್ಥಾನಗಳನ್ನು ಗೆದ್ದಿತ್ತು. ಈ ಎರಡೂ ಚುನಾವಣೆಗಳು ವಸುಂಧರಾ ರಾಜೆ ನೇತೃತ್ವದಲ್ಲಿ ನಡೆದಿದ್ದವು. ಈ ವರ್ಷದ ಲೋಕಸಭೆ ಚುನಾವಣೆಯನ್ನು ಹೊಸ ಆಡಳಿತಕ್ಕೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ ಮತ್ತು ಬಿಜೆಪಿಯ ಸ್ಥಾನಗಳು ಕಡಿಮೆಯಾದರೆ, ಶರ್ಮಾ ಅವರು ತಮ್ಮ ಸರ್ಕಾರ ಮತ್ತು ಪಕ್ಷದೊಳಗಿನ ಬಣಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಲಾಗಿದೆ.