ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಗುರುವಾರ ರಾಜೀನಾಮೆ ನೀಡಿದ್ದರು.

ಇದೀಗ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಫಾರಸಿನ ಮೇರೆಗೆ ಬಿ.ನಾಗೇಂದ್ರ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ.

ಯುವಜನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದರು. ಹೀಗಾಗಿ ಭಾರತದ ಸಂವಿಧಾನದ 164 (1) ನೇ ವಿಧಿಯಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು, ನಾಗೇಂದ್ರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದ್ದ ಬಿ.ನಾಗೇಂದ್ರ

ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ  ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ  ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇದರಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್‌ ಪತನವಾದಂತಾಗಿದೆ.

ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಉಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾಗೇಂದ್ರ ರಾಜೀನಾಮೆ ಪತ್ರ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಒಂದೇ ಸಾಲು ಬರೆದಿರುವುದು ಕಂಡುಬಂದಿದ್ದು, ನನ್ನ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ ಬರೆದಿದ್ದರು.

ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಗೇಂದ್ರ ಅವರು, ರಾಜೀನಾಮೆ ನೀಡುವುದು ನನ್ನ ಸ್ವ ನಿರ್ಧಾರವಾಗಿದೆ. ಇದಕ್ಕಾಗಿ ಯಾರೂ ಒತ್ತಡ ಹಾಕಿಲ್ಲ. ಆತ್ಮ ಸಾಕ್ಷಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ನಿರ್ದೋಷಿ. ಪ್ರಕರಣದಲ್ಲಿ ತನಿಖೆ ನಡೆದು ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ತಿಳಿಸಿದ್ದರು.

ಕಳೆದ ಹತ್ತು ದಿನಗಳಿಂದ ವಾಲ್ಮೀಕಿ ನಿಗಮ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಕೂಡ ನನ್ನ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.

ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ಗುರುವಾರ ಬೆಳಗ್ಗೆ ಮನವಿ ಪತ್ರಸಲ್ಲಿಸಿದ್ದರು. ನಂತರ ಸಚಿವ ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಪತ್ರ ಸಲ್ಲಿಸಿದ್ದರು.

Previous Post
ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ
Next Post
ಬಾಹ್ಯಾಕಾಶ ನಿಲ್ದಾಣ ತಲುಪಿದ ಸುನಿತಾ

Recent News