ಬೀಫ್ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಪಾಸ್: ಸಾಮಾನ್ಯ ಪ್ರಕ್ರಿಯೆ ಎಂದ ಬಿಎಸ್‌ಎಫ್‌

ಬೀಫ್ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಪಾಸ್: ಸಾಮಾನ್ಯ ಪ್ರಕ್ರಿಯೆ ಎಂದ ಬಿಎಸ್‌ಎಫ್‌

ನವದೆಹಲಿ, ಜು. 9: ಭಾರತ ಮತ್ತು ಬಾಂಗ್ಲಾದೇಶದ ಗಡಿ ಬಳಿ ಗೋಮಾಂಸ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಶಂತನು ಠಾಕೂರ್ ಪಾಸ್ (ಅಧಿಕೃತ ಸಾಗಣೆ ಪರವಾನಗಿ ಪತ್ರ) ವಿತರಿಸುತ್ತಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೋಮವಾರ ಆರೋಪಿಸಿದ್ದರು. ಆದರೆ, ಇದು ಸಾಮಾನ್ಯ ಪ್ರಕ್ರಿಯೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತಿಳಿಸಿದೆ.

ಪಾಸ್‌ನ ಫೋಟೋ ಪೋಸ್ಟ್‌ ಮಾಡಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದ ಮಹುವಾ ಮೊಯಿತ್ರಾ “ಶಂತನು ಠಾಕೂರ್ ಮೂರು ಕೆಜಿ ಗೋಮಾಂಸ ಕಳ್ಳಸಾಗಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ತನ್ನ ಪೋಸ್ಟ್ ಅನ್ನು ಬಿಎಸ್‌ಎಫ್ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದ ಮಹುವಾ, ಗೋರಕ್ಷಕರು ಮತ್ತು ಗೋದಿ ಮಾಧ್ಯಮಗಳು ಎಲ್ಲಿವೆ” ಎಂದು ತಿವಿದಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್‌ಎಫ್‌ ಅಧಿಕಾರಿಗಳು “ಇದೊಂದು ಸಾಮಾನ್ಯ ಪ್ರಕ್ರಿಯೆ. ಜನ ಪ್ರತಿನಿಧಿಗಳು ಸ್ಥಳೀಯರಿಗೆ ಅಂತಹ ಪಾಸ್ ನೀಡುವ ಅಧಿಕಾರ ಹೊಂದಿದ್ದಾರೆ. ಅಲ್ಲದೆ ಗೋಮಾಂಸ ಸೇವನೆ ಪಶ್ಚಿಮ ಬಂಗಾಳದಲ್ಲಿ ಅಪರಾಧ ಅಲ್ಲ” ಎಂದು ವರದಿಯಾಗಿದೆ.

ಭಾರತ-ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ಹಕೀಂಪುರ ಮತ್ತು ತರಲಿ ಪ್ರದೇಶಗಳ ಜನರಿಗೆ ಪಂಚಾಯತ್, ವಾರ್ಡ್‌ ಸದಸ್ಯರು, ಕೌನ್ಸಿಲರ್‌ಗಳು ಸೇರಿದಂತೆ ಜನ ಪ್ರತಿನಿಧಿಗಳು ಪಾಸ್ ಮತ್ತು ವ್ಯವಹಾರ ಪರವಾನಗಿ ನೀಡುವುದು ಸಾಮಾನ್ಯ ಪ್ರಕ್ರಿಯೆ. ಗಡಿಯಲ್ಲಿ ಬಾಂಗ್ಲಾ ದೇಶದಿಂದ ಜಾನುವಾರುಗಳ ಕಳ್ಳಸಾಗಣಿಕೆ ತಡೆಯಲು ನಿಯೋಜಿಸಿರುವ ಬಿಎಸ್‌ಎಫ್‌ ಯೋಧರು ಸ್ಥಳೀಯರನ್ನು ಪರಿಶೀಲನೆ ನಡೆಸಿದರೆ ಪಾಸ್‌, ಪರವಾನಿಗೆಗಳು ಅವರಿಗೆ ಸಹಾಯವಾಗುತ್ತದೆ. ಕಳೆದ ಎರಡು ದಶಕಗಳಿಂದ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ
ಮಹುವಾ ಮೊಯಿತ್ರಾ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್‌ನಗರ ಪ್ರದೇಶದ ಹಕೀಂಪುರದ 8 ಟಿಎಂಸಿ ಕೌನ್ಸಿಲರ್‌ಗಳು ದಿನವೊಂದಕ್ಕೆ ಸುಮಾರು 80 ಪಾಸ್‌ಗಳನ್ನು ವಿತರಿಸುತ್ತಾರೆ. ಸ್ಥಳೀಯ ನಿವಾಸಿಗಳು ಗೋಮಾಂಸ ಸಾಗಣೆ ಮಾಡಲು ಬಿಎಸ್‌ಎಫ್‌ನಿಂದ ಅನುಮತಿ ಕೋರಿ ಪಾಸ್‌ ನೀಡಲಾಗುತ್ತದೆ. ಹಕೀಂಪುರ ಪ್ರದೇಶ ಸಚಿವ ಶಂತನು ಠಾಕೂರ್‌ ಪ್ರತಿನಿಧಿಸುವ ಬೋಂಗಾವ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ ಎಂದು ವರದಿ ತಿಳಿಸಿದೆ. ಪಾಸ್ ವಿತರಿಸುವ ವಿಚಾರ ಈ ಹಿಂದೆ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. 2013ರಲ್ಲಿ ಕೋರ್ಟ್‌ ಬಿಎಸ್‌ಎಫ್‌ ಪರ ತೀರ್ಪು ನೀಡಿತ್ತು. ಗಡಿ ಭದ್ರತೆಯ ನಿಟ್ಟಿನಲ್ಲಿ ಪಾಸ್ ವಿತರಿಸುವುದು ಅಗತ್ಯ ಎಂದು ಕೋರ್ಟ್ ಹೇಳಿತ್ತು ಎಂದು ತಿಳಿದು ಬಂದಿದೆ.

Previous Post
ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗಾಗಿ ಸಮಿತಿ ರಚಿಸಿದ ತಮಿಳುನಾಡು ಸರ್ಕಾರ
Next Post
ಹೇಮಂತ್ ಸೊರೇನ್ ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ

Recent News