ನವದೆಹಲಿ, ಆ. 30: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರಿಗಳು ಬುಲ್ಡೋಝರ್ ಕಾರ್ಯಾಚರಣೆ ಅಥವಾ ಮನೆಗಳ ಧ್ವಂಸ ನಡೆಸುತ್ತಿರುವುದರ ವಿರುದ್ದ ತುರ್ತು ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಇಂದು ಎರಡು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳ ವಿಚಾರಣೆ ಸೆಪ್ಟೆಂಬರ್ 2 ರಂದು ನಡೆಯಲಿದೆ. ಒಂದು ಅರ್ಜಿಯನ್ನು ಹಿರಿಯ ವಕೀಲ ಸಿಯು ಸಿಂಗ್ ಅವರು, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠದ ಮುಂದೆ ಪ್ರಸ್ತಾಪಿಸಿದ್ದು, ಅದನ್ನು ಬೃಂದಾ ಕಾರಟ್ VS ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರರು ಪ್ರಕರಣದ ಮುಂದಿನ ವಿಚಾರಣೆಯ ವೇಳೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ 2022ರಲ್ಲಿ ಕೈಗೊಂಡ ಧ್ವಂಸ ಕಾರ್ಯಾಚರಣೆ ಪ್ರಶ್ನಿಸಿ ಬೃಂದಾ ಕಾರಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಯುತ್ತಿದೆ.
ಮತ್ತೊಂದು ಅರ್ಜಿಯನ್ನು ಅಡ್ವೊಕೇಟ್ ಪೌಝಿಯಾ ಶಕೀಲ್ ಸಲ್ಲಿಸಿದ್ದಾರೆ. ಈ ಅರ್ಜಿ ರಾಜಸ್ಥಾನದ ಉದಯಪುರದಲ್ಲಿ ಬಾಡಿಗೆದಾರನ ಮಗನ ಮೇಲೆ ಕ್ರಿಮಿನಲ್ ಪ್ರಕರಣವಿದೆ ಎಂಬ ಕಾರಣಕ್ಕೆ ತನ್ನ ಮನೆಯನ್ನು ಕೆಡವಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದಾಗಿದೆ. ಈ ಅರ್ಜಿಯಲ್ಲಿ ಮಧ್ಯಂತರ ಆದೇಶಕ್ಕೆ ಅರ್ಜಿದಾರ ಕೋರಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ನ್ಯಾಯಾಧೀಶರು ಎರಡೂ ಪ್ರಕರಣಗಳನ್ನು ಸೆಪ್ಟೆಂಬರ್ 2ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಏಪ್ರಿಲ್ 2022ರಲ್ಲಿ ಕಟ್ಟಡಗಳ ಧ್ವಂಸ ಕಾರ್ಯಾಚರಣೆಗೆ ಮುಂದಾಗಿದ್ದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಧ್ವಂಸ ಕಾರ್ಯಾಚರಣೆಗೆ ತಡೆ ನೀಡಿದೆ. ಆದರೆ, ಅರ್ಜಿದಾರರು ಆರೋಪ ಕೇಳಿ ಬಂದ ತಕ್ಷಣ ಬುಲ್ಡೋಝರ್ ಮೂಲಕ ಕಟ್ಟಡ ಕೆಡವುವ ಕ್ರಮವನ್ನು ತಡೆಯುಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಅರ್ಜಿದಾರರಲ್ಲಿ ಒಬ್ಬರಾದ ಮಾಜಿ ರಾಜ್ಯಸಭಾ ಸಂಸದೆ ಮತ್ತು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು, ಏಪ್ರಿಲ್ 2022ರಲ್ಲಿ ಶೋಭಾ ಯಾತ್ರೆಯ ಮೆರವಣಿಗೆ ಮೇಲೆ ಕಲ್ಲು ತೂರಾಟದಿಂದ ಉಂಟಾದ ಕೋಮು ಹಿಂಸಾಚಾರದ ಬಳಿಕ, ಜಹಾಂಗೀರ್‌ಪುರಿ ಪ್ರದೇಶದಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಟ್ಟಡಗಳನ್ನು ನೆಲಸಮ ಮಾಡಿದ್ದನ್ನು ಪ್ರಶ್ನಿಸಿದ್ದರು.
2023ರ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಾಗ, ಹಿರಿಯ ವಕೀಲ ದುಶ್ಯಂತ್ ದವೆ (ಕೆಲ ಅರ್ಜಿದಾರರ ಪರ ವಾದ ಮಂಡಿಸಿದವರು) ರಾಜ್ಯ ಸರ್ಕಾರಗಳು ಅಪರಾಧಗಳ ಆಪಾದಿತ ಜನರ ಮನೆಗಳನ್ನು ಕೆಡವುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ‘ಮನೆ’ ಎಂಬುವುದು ಜನರ ಹಕ್ಕು ಎಂದು ಒತ್ತಿ ಹೇಳಿದ್ದರು. ಅದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬದುಕುವ ಹಕ್ಕಿನ ಭಾಗ ಎಂದು ವಾದಿಸಿದ್ದರು. ಅಲ್ಲದೆ ಕೆಡವಿದ ಮನೆಗಳ ಪುನರ್ ನಿರ್ಮಾಣಕ್ಕೆ ನ್ಯಾಯಾಲಯ ಆದೇಶ ನೀಡಬೇಕು ಎಂದು ಕೋರಿದ್ದರು.