ಬೃಹತ್ ಭೂಕುಸಿತ 2,000 ಕ್ಕೂ ಹೆಚ್ಚು ಜನರು ಸಮಾಧಿ
ನವದೆಹಲಿ : ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಬೃಹತ್ ಭೂಕುಸಿತದಲ್ಲಿ 2,000 ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಪಾಪುವ ನ್ಯೂ ಗಿನಿಯಾ ಆಡಳಿತ ಸೋಮವಾರ ಮಾಧ್ಯಮಗಳಿಗೆ ತಿಳಿಸಿದೆ. ಭೂಕುಸಿತವು 2,000ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ಸಮಾಧಿ ಮಾಡಿದ್ದು, ದೊಡ್ಡ ವಿನಾಶವನ್ನು ಉಂಟುಮಾಡಿದೆ ಎಂದು ದೇಶದ ರಾಷ್ಟ್ರೀಯ ವಿಪತ್ತು ಕೇಂದ್ರವು ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿರುವ ಯುಎನ್ ಕಚೇರಿಗೆ ತಿಳಿಸಿದೆ. ಎಂಗಾ ಪ್ರಾಂತ್ಯದಲ್ಲಿ ಗುಡ್ಡಗಾಡು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಮುಂಗಾಲೋ ಪರ್ವತದ ಒಂದು ಭಾಗವು ಕುಸಿದು ಬಿದ್ದಾಗ, ಹಲವಾರು ಮನೆಗಳು ನಾಶವಾಗಿದ್ದು, ಅವುಗಳಲ್ಲಿ ಮಲಗಿದ್ದ ಜನರು ಜೀವಂತ ಸಮಾಧಿಯಾಗಿದ್ದಾರೆ. ಭೂಕುಸಿತದಿಂದ ಕಟ್ಟಡಗಳು ಮತ್ತು ತೋಟಗಳಿಗೆ ದೊಡ್ಡ ಪ್ರಮಾಣದ ಹಾಣಿ ಉಂಟು ಮಾಡಿದೆ. ದೇಶದ ಆರ್ಥಿಕ ಜೀವನಾಧಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ವಿಪತ್ತು ಕಚೇರಿ ತಿಳಿಸಿದೆ. ಪೋರ್ಗೆರಾ ಮೈನ್‌ಗೆ ಹೋಗುವ ಮುಖ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಸೋಮವಾರ ಬೆಳಿಗ್ಗೆ ಯುಎನ್ ಅಧಿಕಾರಿಗಳು ಹೇಳಿಕೆ ಹೊರಡಿಸಿದ್ದಾರೆ. ಭೂಮಿ ಕುಸಿತವು ನಿಧಾನವಾಗಿ ಸ್ಥಳಾಂತರಗೊಳ್ಳುತ್ತಿರುವುದರಿಂದ ಪರಿಸ್ಥಿತಿಯು ಅಸ್ಥಿರವಾಗಿದೆ, ಇದು ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೆ ಸಮಾನವಾಗಿ ಅಪಾಯವನ್ನುಂಟು ಮಾಡುತ್ತದೆ ದುರಂತದ ಪ್ರಮಾಣವು ಎಲ್ಲಾ ಸಿಬ್ಬಂದಿಗಳಿಗೆ ತಕ್ಷಣದ ಮತ್ತು ಸಹಯೋಗದ ಕ್ರಮಗಳು ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಪಪುವಾ ನ್ಯೂಗಿನಿಯಾದ ಅಭಿವೃದ್ಧಿ ಪಾಲುದಾರರಿಗೆ ಮತ್ತು ಇತರ ಅಂತರರಾಷ್ಟ್ರೀಯ ಸ್ನೇಹಿತರಿಗೆ ಇತ್ತೀಚಿನ ಪರಿಸ್ಥಿತಿಯನ್ನು ತಿಳಿಸಲು ಇದು ಯುಎನ್‌ಗೆ ಕರೆ ನೀಡಿತು. ವಿಪತ್ತು ಕೇಂದ್ರದ ಮೂಲಕ ಸಹಾಯವನ್ನು ಸಮನ್ವಯಗೊಳಿಸಬೇಕು ಎಂದು ಅದು ಹೇಳಿದೆ