ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ

ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ

ಬೆಂಗಳೂರು ಮಾರ್ಚ್ 19: ಇತ್ತೀಚೆಗೆ ಬೆಂಗಳೂರಿನಲ್ಲಿ ಬಾಂಬರ್‌ಗಳ ಭೀತಿ ಹೆಚ್ಚಾಗಿದ್ದು ಸದ್ದಿಲ್ಲದೇ ತಮ್ಮ ಕಾರ್ಯಗಳನ್ನು ಮುಗಿಸಿ ಎಸ್ಕೇಪ್ ಆಗುತ್ತಿದ್ದಾರೆ. ಇದಕ್ಕೆ ರಾಮೇಶ್ವರಂ ಕೆಫೆ ಬಹು ದೊಡ್ಡ ಸಾಕ್ಷಿ. ಶಾಲೆಗಳಲ್ಲಿ ಬಾಂಬ್ ಇಡುವ ಬೆದರಿಕೆ ಸಂದೇಶಗಳು ಶಾಲೆಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಇತ್ತೀಚೆಗೆ ಹೆಚ್ಚಾಗಿ ಬಂದಿದ್ದವು. ಈಗ ನಗರದ ಶಾಲೆಯೊಂದರಲ್ಲಿ ಸ್ಪೋಟಕಗಳು ಪತ್ತೆಯಾಗಿವೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೌದು…. ಬೆಂಗಳೂರಿನ ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ಮಕ್ಕಳು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ಸ್ಪೋಟಕಗಳು ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.

ಇವುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ತಿಳಿದು ಬಂದಿದೆ. ಶಾಲೆಯ ಬಳಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಅಲ್ಲಿ ಬಂಡೆಗಳ ಸ್ಪೋಟಕ್ಕೆ ಇವುಗಳನ್ನು ತಂದಿರಬಹುದು ಎನ್ನುವ ಅನುಮಾನ ಮೂಡಿದೆ. ಜೊತೆಗೆ ಇವುಗಳನ್ನು ಟ್ರಾಕ್ಟರ್‌ ಒಂದರಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅಕ್ರಮ ಸ್ಪೋಟಕ ಖರೀದಿ ಹಾಗೂ ಸಾಗಾಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ್ ಪ್ರಕರಣ ಇನ್ನೂ ಮಾಸಿಲ್ಲ. ಅದಾಗಲೇ ಶಾಲೆಯ ಆವರಣದಲ್ಲಿ ಸ್ಪೋಟಕಗಳು ಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಇನ್ನೂ ಆರೋಪಿ ಪತ್ತೆಯಾಗಿಲ್ಲ. ಈ ಪ್ರಕರಣಕ್ಕೂ ಮುನ್ನ ಬೆಂಗಳೂರಿನ ಅನೇಕ ಪ್ರತಿಷ್ಠಿತ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ಪರಿಶೀಲನೆ ಮಾಡಿಸಿದ್ದವು. ಆದರೆ ಯಾವುದೇ ಸ್ಫೊಟಕಗಳು ಪತ್ತೆಯಾಗಿರಲಿಲ್ಲ. ಇದೊಂದು ಹುಸಿ ಸಂದೇಶ ಎನ್ನುವುದನ್ನು ಪೊಲೀಸರು ಪರಿಶೀಲನೆ ಬಳಿಕ ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಮಾರ್ಚ್‌ ಒಂದರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಾಗಿದ್ದು ಎಲ್ಲೆಡೆ ಪೊಲೀಸರು ಕಣ್ಗಾವಲು ಇದೆ. ಬೆಂಗಳೂರಿನಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳ ಬಳಿಕ ಪೊಲೀಸ್ ನಗರದಲ್ಲಿ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ರಾಮೇಶ್ವರಂ ಕೆಫೆ ಸ್ಪೋಟದ ಬಳಿಕ ಯಾವ ಸಂದೇಶವನ್ನೂ ನಿರ್ಲಕ್ಷ್ಯ ಮಾಡದೆ ಅದರ ಹಿಂದಿರುವ ಉಗ್ರರ ಕೈವಾಡವನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಪ್ರೌವೃತ್ತರಾಗಿದ್ದಾರೆ.

Previous Post
CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ
Next Post
ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ: ಸಿದ್ದರಾಮಯ್ಯ

Recent News