ಭಾರತೀಯ ವಿದ್ಯಾರ್ಥಿನಿಯ ಕೊಂದ ಯುಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕಿಲ್ಲ?

ಭಾರತೀಯ ವಿದ್ಯಾರ್ಥಿನಿಯ ಕೊಂದ ಯುಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕಿಲ್ಲ?

ನವದೆಹಲಿ, ಫೆ. 24: ಯುಎಸ್‌ನ ವಾಷಿಂಗ್ಟನ್‌ ರಾಜ್ಯದಲ್ಲಿ ಸಂಭವಿಸಿದ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಆದೋನಿಯ 23 ವರ್ಷದ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರ ಸಾವು ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಅಪಘಾತದಲ್ಲಿ ಜಾಹ್ನವಿ ಮೃತಪಟ್ಟಿದ್ದು, ಆಕೆಯ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 23,2023ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ರಸ್ತೆ ದಾಟುತ್ತಿದ್ದ ಜಾಹ್ನವಿ ಕಂಡುಲಾ ಮೇಲೆ ಕೆವಿನ್‌ ಡೇವ್‌ ಎಂಬ ಪೊಲೀಸ್ ಅಧಿಕಾರಿ ವಾಹನ ಹರಿಸಿ ಸಾವಿಗೆ ಕಾರಣನಾಗಿದ್ದ. ತುರ್ತು ಕರೆಯೊಂದರ ಹಿನ್ನೆಲೆಯಲ್ಲಿ ಸ್ಥಳವೊಂದಕ್ಕೆ ತೆರಳಲು 120 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಕೆವಿನ್ ಡೇವ್ ಜಾಹ್ನವಿ ಮೇಲೆ ವಾಹನ ಹರಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಡೇವ್ ವಿರುದ್ದ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಾಷಿಂಗ್ಟನ್‌ನ ಕಿಂಗ್‌ ಕೌಂಟಿ ಪ್ರಾಸಿಕ್ಯೂಟರ್‌ ಅವರ ಕಚೇರಿ ಹೇಳಿದೆ.

ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಜನವರಿ 2023ರಲ್ಲಿ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರ ಮೇಲೆ ವಾಹನ ಹರಿಸಿ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಲಭ್ಯವಿರುವ ಎಲ್ಲಾ
ಸಾಕ್ಷ್ಯಗಳನ್ನು ಪರಿಶೀಲಿಸುವುದು ಕಿಂಗ್ ಕೌಂಟಿ ಪ್ರಾಸಿಕ್ಯೂಟಿಂಗ್ ಅಟಾರ್ನಿ ಕಚೇರಿಯ ಜವಾಬ್ದಾರಿಯಾಗಿದೆ. ನಾವು ಹಿರಿಯ ಉಪ ಪ್ರಾಸಿಕ್ಯೂಟಿಂಗ್ ವಕೀಲರು ಮತ್ತು ಇತರ ಅಧಿಕಾರಿಗಳ ಮೂಲಕ ಪ್ರಕರಣದ ತನಿಖೆ ನಡೆಸಿದ್ದೇವೆ. ಈ ವೇಳೆ ವಾಷಿಂಗ್ಟನ್ ಸ್ಟೇಟ್ ಕಾನೂನಿನಡಿಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಮಗೆ ಸಾಕಷ್ಟು ಸಾಕ್ಷ್ಯಗಳು ದೊರೆತಿಲ್ಲ ಎಂದು ಕಿಂಗ್‌ ಕೌಂಟಿ ಪ್ರಾಸಿಕ್ಯೂಟರ್‌ ಲೀಸಾ ಮ್ಯಾನಿಯನ್ ತಿಳಿಸಿದ್ದಾರೆ.

ಘಟನೆಯ ಬಾಡಿಕ್ಯಾಮ್‌ ಫೂಟೇಜ್‌ನಲ್ಲಿ ಸಿಯಾಟಲ್‌ ಪೊಲೀಸ್‌ ಇಲಾಖೆಯ ಅಧಿಕಾರಿ ಡೇನಿಯಲ್‌ ಆಡೆರರ್‌ ಈ ಅಪಘಾತವನ್ನು ಗೌಣವಾಗಿ ಪರಿಗಣಿಸಿದ್ದರಲ್ಲದೆ, ಕೆವಿನ್‌ ಡೇವ್‌ ಅವರು ತಪ್ಪು ಮಾಡಿದ್ದಾರೆಂಬ ವಾದವನ್ನು ಅಲ್ಲಗಳೆದಿದ್ದರು ಹಾಗೂ ಕ್ರಿಮಿನಲ್‌ ತನಿಖೆ ಅಗತ್ಯವಿಲ್ಲ ಎಂದಿದ್ದರು. ವಿದ್ಯಾರ್ಥಿನಿ ಸಾವನ್ನಪ್ಪಿರುವುದನ್ನು ಬೊಟ್ಟು ಮಾಡುತ್ತಾ ಡೇನಿಯರ್‌ ನಗುತ್ತಿರುವ ಬಾಡಿಕ್ಯಾಮ್‌ ವಿಡಿಯೋ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು.
ಪೋಲೀಸ್ ಅಧಿಕಾರಿ ವಿರುದ್ಧದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಯುಎಸ್ ಕೋರ್ಟ್ ನಿರ್ಧಾರವನ್ನು ಬಿಆರ್‌ಎಸ್ ಪಕ್ಷದ ನಾಯಕ ಹಾಗೂ ತೆಲಂಗಾಣದ ಮಾಜಿ ಸಚಿವ ಕೆ.ಟಿ. ರಾಮರಾವ್(ಕೆಟಿಆರ್) ‘ಅವಮಾನಕರ’ ಎಂದಿದ್ದಾರೆ. ಯುಎಸ್ ನ್ಯಾಯಾಲಯದ ತೀರ್ಪು ‘ಸ್ವೀಕಾರ್ಹವಲ್ಲ’ ಎಂದಿರುವ ಅವರು, ಪ್ರಕರಣದ ಸ್ವತಂತ್ರ ತನಿಖೆಗೆ ಯುಎಸ್ ಅನ್ನು ಒತ್ತಾಯಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರಕರಣ ಕುರಿತು ಯುಎಸ್ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರಿಗೆ ಒತ್ತಾಯಿಸಿರುವ ಕೆಟಿಆರ್, ಮಹತ್ವಾಕಾಂಕ್ಷೆ ಹೊಂದಿದ್ದ ಯುವತಿ ಜೀವ ಬಲಿ ಪಡೆದಿರುವುದು ದುರಂತವಾದರೆ, ಆಕೆಗೆ ನ್ಯಾಯ ಸಿಗದಿರುವುದು ಅದಕ್ಕಿಂತ ದೊಡ್ಡ ದುರಂತ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Previous Post
ಭೂರಹಿತ ದಲಿತ ಕಾರ್ಮಿಕರಿಂದ ಹಕ್ಕಿಗಾಗಿ ಹೋರಾಟ
Next Post
ಬಿಲ್ಕೀಸ್‌ ಬಾನು ಪ್ರಕರಣ: ಪೆರೋಲ್‌ ಮೇಲೆ ಹೊರ ಬರುತ್ತಿರುವ ಅಪರಾಧಿಗಳು!

Recent News