ಭಾರತ್ ಜೋಡೊ ನ್ಯಾಯ ಯಾತ್ರೆ ರದ್ದು: ರೈತ ಪ್ರತಿಭಟನೆಯತ್ತ ರಾಹುಲ್ ಗಾಂಧಿ

ಭಾರತ್ ಜೋಡೊ ನ್ಯಾಯ ಯಾತ್ರೆ ರದ್ದು: ರೈತ ಪ್ರತಿಭಟನೆಯತ್ತ ರಾಹುಲ್ ಗಾಂಧಿ

ನವದೆಹಲಿ, ಫೆ. 14: ರಾಹುಲ್ ಗಾಂಧಿಯವರು ಜಾರ್ಖಂಡ್‌ನಲ್ಲಿ ನಡೆಸಬೇಕಿದ್ದ ಎರಡನೇ ಹಂತದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ತೆರಳಲಿದ್ದು, ಈ ಕಾರಣಕ್ಕೆ ಯಾತ್ರೆ ರದ್ದಾಗಿದೆ ಎಂದು ತಿಳಿದು ಬಂದಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ರೈತರು ದಿಲ್ಲಿ ಚಲೋ ಹಮ್ಮಿಕೊಂಡಿದ್ದು, ರಾಷ್ಟ್ರ ರಾಜಧಾನಿಯತ್ತ ಆಗಮಿಸುತ್ತಿದ್ದಾರೆ.

ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯ ರಂಕಾದಲ್ಲಿ ನರೇಗಾ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸುವುದು ಈಗಾಗಲೇ ನಿಗದಿಯಾಗಿದೆ. ಅದನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಪಕ್ಷದ ಇತರ ಸದಸ್ಯರು ನಡೆಸಲಿದ್ದಾರೆ. ರಾಹುಲ್ ಗಾಂಧಿಯವರು ತಮ್ಮ ಎರಡನೇ ಹಂತದ ಯಾತ್ರೆಗಾಗಿ ಬುಧವಾರ ಛತ್ತೀಸ್‌ಗಢದಿಂದ ಗರ್ವಾ ಜಿಲ್ಲೆಯ ಮೂಲಕ ಜಾರ್ಖಂಡ್‌ಗೆ ಮರುಪ್ರವೇಶಿಸುವುದೆಂದು ನಿರ್ಧರಿಸಲಾಗಿತ್ತು.
“ಮಂಗಳವಾರ ತಡರಾತ್ರಿ ನಿರ್ಧರಿಸಿದಂತೆ, ಜಾರ್ಖಂಡ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಸೋನಾಲ್ ಶಾಂತಿ ಹೇಳಿದ್ದಾರೆ. ಮತ್ತೊಮ್ಮೆ ಜಾರ್ಖಂಡ್‌ನಲ್ಲಿ ಯಾತ್ರೆ ಪುನರಾರಂಭವಾಗುವ ಸಾಧ್ಯತೆಯಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ಪಕ್ಷದ ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್, ಎನ್ಎಸ್‌ಯುಐ ಉಸ್ತುವಾರಿ ಕನ್ಹಯಾ ಕುಮಾರ್ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಬುಧವಾರ ರಂಕಾದಲ್ಲಿ ನರೇಗಾ ಕಾರ್ಮಿಕರೊಂದಗೆ ನಿಗದಿಯಾಗಿರುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. (ಫೆ.13) ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜೈರಾಮ್ ರಮೇಶ್, “ನಾಳೆ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುವುದಿಲ್ಲ. ನಾಡಿದ್ದು ಬಿಹಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದರು.
ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿಯವರ ಮೊದಲ ಹಂತದ ಯಾತ್ರೆ ಫೆಬ್ರವರಿ ಆರಂಭದಲ್ಲಿ ನಡೆದಿತ್ತು. ಫೆಬ್ರವರಿ 2ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್‌ಗೆ ಪ್ರವೇಶಿಸಿತ್ತು ಮತ್ತು ಫೆಬ್ರವರಿ 6 ರಂದು ಒಡಿಶಾಗೆ ತೆರಳಿತ್ತು. ಜನವರಿ 14ರಂದು ಮಣಿಪುರದಲ್ಲಿ ಪ್ರಾರಂಭವಾದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು 15 ರಾಜ್ಯಗಳ 110 ಜಿಲ್ಲೆಗಳ ಮೂಲಕ 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲು ಯೋಜಿಸಲಾಗಿದೆ.

Previous Post
ಬಿಜೆಪಿ ನಾಯಕಿ ಜಯಪ್ರದಾ ಬಂಧನಕ್ಕೆ ಸೂಚಿಸಿದ ಕೋರ್ಟ್‌
Next Post
ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ತಲೆಕೆಳಗೆ ನೇತುಹಾಕಿ ಹಲ್ಲೆ

Recent News