ಭೂ ಕುಸಿತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ – ಪರಿಶೀಲನೆ

ಭೂ ಕುಸಿತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ – ಪರಿಶೀಲನೆ

ಹಾಸನ: ರಾಜ್ಯದ ವಿವಿಧೆಡೆ ಭಾರಿ ಮಳೆಯಿಂದ ವಿವಿದೆಡೆ ಭೂ ಕುಸಿತ ಹಾಗೂ ರಸ್ತೆಗಳು ಹಾಳಾಗಿದ್ದು ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಭೂ ಕುಸಿತ ತಡೆ ಮಾಡುವ ಕೆಲಸಗಳನ್ನು ಕೈಗೊಳ್ಳಲು ಹಂತ ಹಂತವಾಗಿ 300 ಕೋಟಿ ರೂಪಾಯಿಗಳ ಯೋಜನೆ ಕೈಗೆತ್ತಿಕೊಳ್ಳಲು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ವಿಶೇಷವಾಗಿ ಮಲೆನಾಡು ಭಾಗದ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ ಹೊಸ ಮಾರ್ಗಸೂಚಿಗಳನ್ನು ತಯಾರಿಸಿ ಒಂದುವಾರದ ಒಳಗಾಗಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಲೂಕಿನ ದೊಡ್ಡತಪ್ಪಲು ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಗುಡ್ಡ ಕುಸಿತ ಸ್ಥಳಕ್ಕೆ ಇಂದು ಅಧಿಕಾರಿಗಳ ಜೊತೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನೆನ್ನೆ ದೊಡ್ಡ ತಪ್ಪಲು ಬಳಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಭೂ ಕುಸಿತ ಉಂಟಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಕಳೆದ 20 ವರ್ಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ ದೊಡ್ಡ ಸವಾಲುಗಳ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿದೆ ಆದರೆ ಇದೀಗ ನಡೆದಿರುವ ಭೂ ಕುಸಿತಕ್ಕೆ ಬಹಳ ಕಡಿದಾಗಿ ರಸ್ತೆ ಬದಿಯ ಗುಡ್ಡಗಳಿಂದ ಮಣ್ಣು ತೆಗೆದಿರುವುದು ಒಂದು ಕಾರಣವಾಗಿದೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮುಖ್ಯಮಂತ್ರಿಗಳ ಮೂಲಕವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವ ಮೂಲಕ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಮನವಿ ಮಾಡಲಾಗುವುದು ಎಂದರು.

ಕಾಮಗಾರಿ ವೇಳೆ ರಸ್ತೆಯನ್ನು 56-60 ಅಡಿ ಎತ್ತರಕ್ಕೆ ಏರಿಸಿರುವುದು ಭೂ ಕುಸಿತಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದ್ದು ಈ ಬಗ್ಗೆ ಭಾರತ ಸರ್ಕಾರದ ಭೂ ವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಜೊತೆ ಮಾತನಾಡಿ ಶಿರಾಡಿ ಘಾಟ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ವರದಿ ತರಿಸಿ ಭವಿಷ್ಯದ ಸುರಕ್ಷತೆಗಾಗಿ ಅದಕ್ಕೆ ರಾಜ್ಯ ಸರ್ಕಾರದಿಂದ ಏನೇನು ಸಹಕಾರ ಬೇಕು ಎಲ್ಲವನ್ನೂ ಮಾಡಲು ಸಿಎಂ ಬಳಿ ಮನವಿ ಮಾಡಲಾಗುವುದು ಜೊತೆಗೆ ಮುಂದಿನ ಕಾಮಗಾರಿಗಳಲ್ಲಿ ಕೂಡ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಸಿ.ಈ. ಒ ಪೂರ್ಣಿಮಾ, ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

Previous Post
ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ದೂಷಿಸಿದ ಐಆರ್‌ಜಿಸಿ
Next Post
ಸಿದ್ದರಾಮಯ್ಯ ವಿರುದ್ದ ಬಿಜೆಪಿ ಜೆಡಿಎಸ್ ಷಡ್ಯಂತ್ರ; ಹಿಂದುಳಿದ ವರ್ಗಗಳಿಂದ ಎಚ್ಚರಿಕೆ ಸಮಾವೇಶ.

Recent News