ಮಂಡ್ಯದಲ್ಲಿ ಮಾಜಿ ಸಿಎಂ ಎಚ್​ಡಿಕೆಗೆ ಭರ್ಜರಿ ಗೆಲುವು ಫಿಕ್ಸ್! ಸಕ್ಕರೆ ನಾಡಿನತ್ತ​ ಕುಮಾರಣ್ಣನ ಪಯಣ

ಮಂಡ್ಯದಲ್ಲಿ ಮಾಜಿ ಸಿಎಂ ಎಚ್​ಡಿಕೆಗೆ ಭರ್ಜರಿ ಗೆಲುವು ಫಿಕ್ಸ್! ಸಕ್ಕರೆ ನಾಡಿನತ್ತ​ ಕುಮಾರಣ್ಣನ ಪಯಣ

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಬಹುತೇಕ ಪ್ರಚಂಡ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ.

ಬೆಳಗ್ಗೆ 11 ರ ಹೊತ್ತಿಗೆ ಎಚ್​.ಡಿ.

ಕುಮಾರಸ್ವಾಮಿ ಅವರು 1 ಲಕ್ಷದ 45 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 8ನೇ ಸುತ್ತಿನ ಮತಎಣಿಕೆ ಮುಕ್ತಾಯದ ಹೊತ್ತಿಗೆ ಎಚ್​​ಡಿಕೆ 3,72,848 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ವೆಂಕಟರಮಣಗೌಡ ಅಲಿಯಾಸ್​ ಸ್ಟಾರ್​ ಚಂದ್ರು ಅವರು 2,27,809 ಮತಗಳನ್ನು ಪಡೆದಿದ್ದಾರೆ. ಬರೋಬ್ಬರಿ 1 ಲಕ್ಷದ 45 ಸಾವಿರದ ಅಂತರದೊಂದಿಗೆ ಎಚ್​ಡಿಕೆ ಮಂಡ್ಯದ ಲೋಕಸಭೆಯ ಅಧಿಪತಿಯಾಗುವತ್ತ ಲಗ್ಗೆ ಇಟ್ಟಿದ್ದಾರೆ.

ಗೆಲುವು ಖಚಿತವಾಗುತ್ತಿದ್ದಂತೆ ಮಾಜಿ ಸಿಎಂ ಎಚ್​ಡಿಕೆ ಬೆಂಗಳೂರಿನಿಂದ ಮಂಡ್ಯದತ್ತ ಹೊರಟಿದ್ದಾರೆ. ಮಂಡ್ಯ ಜನರ ಜೊತೆ ಇದ್ದು ತಮ್ಮ ಗೆಲುವನ್ನು ಸಂಭ್ರಮಿಸಿ, ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಎಚ್​ಡಿಕೆ ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಮಂಡ್ಯ ಜನರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸ್ಥಾನಕ್ಕೆ ಕುಸಿದಿದ್ದ ಜೆಡಿಎಸ್​ ಈ ಬಾರಿ ಪುಟಿದೇಳುವ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಜತೆ ಕೈಜೋಡಿಸಿ ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ ಮುನ್ನಡೆ ಸಾಧಿಸಿದೆ. ಮಂಡ್ಯದಲ್ಲಿ ಗೆಲುವು ಖಚಿತವಾಗಿದೆ. ಉಳಿದಂತೆ ಕೋಲಾರ ಮತ್ತು ಹಾಸನದಲ್ಲಿ ಜೆಡಿಎಸ್​ ಮುನ್ನಡೆಯನ್ನು ಸಾಧಿಸಿದೆ.

ಕಳೆದ ಬಾರಿ ಜೆಡಿಎಸ್​ ಕಾಂಗ್ರೆಸ್​ ಜತೆ ಕೈಜೋಡಿಸಿತ್ತು. ಆದರೆ, ಎರಡೂ ಪಕ್ಷಗಳು ಕೇವಲ ಒಂದೊಂದು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿದ್ದವು. ಮಂಡ್ಯದಲ್ಲಿ ಸುಮಲತಾ ಅಂಬರೀಷ್​ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ರಾಜಕೀಯದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಜೆಡಿಎಸ್​ ಪಕ್ಷಕ್ಕೆ ಬಿಜೆಪಿ ಟಾನಿಕ್​ ಆಗಿ ಕೆಲಸ ಮಾಡಿದ್ದು, ಜೆಡಿಎಸ್​ ಮತ್ತೆ ಲಯ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

Previous Post
ಹೂಡಿಕೆದಾರರಿಗೆ ಬಿಗ್ ಶಾಕ್: 21.5 ಲಕ್ಷ ಕೋಟಿ ನಷ್ಟ: ಭಾರೀ ಕುಸಿತ ಕಂಡ ಸೆನ್ಸೆಕ್ಸ್
Next Post
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ‘ಡಾ.ಸಿಎನ್ ಮಂಜುನಾಥ್’ಗೆ ಭರ್ಜರಿ ಗೆಲುವು

Recent News