ಮಣಿಪುರದ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಆಗ್ರಹ
ನವದೆಹಲಿ, ಏ. 20: ಮಣಿಪುರದ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದ್ದು, ಮತದಾನದ ವೇಳೆ ಮತ ಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರವೆಸಗಲಾಗಿದೆ ಎಂದು ಆರೋಪಿಸಿದೆ. ನಾವು ಭಾರತೀಯ ಚುನಾವಣಾ ಆಯೋಗ, ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಚುನಾವಣಾ ಆಕ್ರಮದ ಕುರಿತು ದೂರು ನೀಡಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಳ ಮಣಿಪುರ ಲೋಕಸಭಾ ಕ್ಷೇತ್ರದ 36 ಮತ್ತು ಹೊರ ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ನಾವು ಆಗ್ರಹಿಸಿದ್ದೇವೆ. ಕೆಲವು ದಿನಗಳಿಂದ ಅಪರಿಚಿತ ಶಸ್ತ್ರಧಾರಿ ದುಷ್ಕರ್ಮಿಗಳು ಕಾಂಗ್ರೆಸ್ ಅಭ್ಯರ್ಥಿ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಮತ್ತು ಪಕ್ಷದ ಚುನಾವಣಾ ಏಜೆಂಟರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೇಘಚಂದ್ರ ಸಿಂಗ್ ಹೇಳಿದ್ದಾರೆ.

ತೌಬಲ್ ಜಿಲ್ಲೆಯ ವಾಂಗ್‌ಖೇಮ್ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಮೇಘಚಂದ್ರ ಅವರು, “ಏಜೆಂಟರು ಮತಗಟ್ಟೆಗಳ ಒಳಗೆ ಕುಳಿತುಕೊಳ್ಳಲು ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಮತದಾರರು ಬೇರೆ ಬೇರೆ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಅವಕಾಶ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಒಳ ಮಣಿಪುರದ 36 ಮತಗಟ್ಟೆಗಳಲ್ಲಿ ಆಂಡ್ರೊ ಮತ್ತು ಯೈಸ್ಕುಲ್ ವಿಧಾನಸಭಾ ಕ್ಷೇತ್ರಗಳ ತಲಾ ಒಂದು ಬೂತ್, ಕೊಂತೌಜಮ್ ವಿಧಾನಸಭಾ ಕ್ಷೇತ್ರದ ಎರಡು, ಹೀಂಗಾಂಗ್, ಖುರೈ, ಓಯಿನಾಮ್ ಮತ್ತು ಮೊಯಿರಾಂಗ್ ವಿಧಾನಸಭಾ ಕ್ಷೇತ್ರಗಳ ತಲಾ ಮೂರು, ಕ್ಷೇತ್ರಿಗಾವ್ ವಿಧಾನಸಭಾ ಕ್ಷೇತ್ರದ ನಾಲ್ಕು, ಥೋಂಗ್ಜು ಮತ್ತು ಸೆಕ್ಮಾಯಿ ವಿಧಾನಸಭಾ ಕ್ಷೇತ್ರಗಳ ತಲಾ ಐದು ಮತಗಟ್ಟೆಗಳು ಮತ್ತು ಕೀರಾವ್ ವಿಧಾನಸಭಾ ಕ್ಷೇತ್ರದ ಆರು ಮತಗಟ್ಟೆಗಳು ಸೇರಿವೆ. ಹೊರ ಮಣಿಪುರದ 11 ಮತಗಟ್ಟೆಗಳು ಸುಗ್ನು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ ಎಂದು ಮೇಘಚಂದ್ರ ಮಾಹಿತಿ ನೀಡಿದ್ದಾರೆ. ಮತದಾರರ ಹಕ್ಕುಗಳನ್ನು ಕಡೆಗಣಿಸಿ, ಪ್ರಜಾಪ್ರಭುತ್ವದ ಸಂಪೂರ್ಣ ಹಾಳುಗೆಡವಿರುವುದು ಚುನಾವಣೆಯಲ್ಲಿ ಬಹಿರಂಗಗೊಂಡಿದೆ. ಆಡಳಿತದಿಂದ ಇಂತಹ ಕೃತ್ಯ ದುರದೃಷ್ಟಕರ. ಜನರು ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸುವಂತೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಕ್ಷೇತ್ರಿಮಯುಮ್ ಸಾಂತಾ ಮನವಿ ಮಾಡಿದ್ದಾರೆ.