ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗೆ ಥಳಿತ: ಬಿಜೆಪಿ ಜಿಲ್ಲಾಧ್ಯಕ್ಷ ಅರೆಸ್ಟ್
ನವದೆಹಲಿ, ಏ.30: ಚುನಾವಣೆ ವೇಳೆ ಮತಗಟ್ಟೆಯಲ್ಲಿದ್ದ ಚುನಾವಣಾ ಅಧಿಕಾರಿ ಮೇಲೆ ಬಿಜೆಪಿ ನಾಯಕ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ತ್ರಿಪುರ ಪೂರ್ವ ಕ್ಷೇತ್ರದಲ್ಲಿ ನಡೆದಿದೆ. 2ನೇ ಹಂತದ ಮತದಾನದ ವೇಳೆ ತ್ರಿಪುರ ಪೂರ್ವ ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿಯ ಉತ್ತರ ತ್ರಿಪುರಾ ಘಟಕದ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ.
ಬಿಜೆಪಿಯ ಉತ್ತರ ತ್ರಿಪುರಾ ಜಿಲ್ಲೆಯ ಅಧ್ಯಕ್ಷ ಕಾಜಲ್ ದಾಸ್ ಮತ್ತು ಆತನ ಬೆಂಬಲಿಗರು ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.
ಬಾಗ್ಬಾಸಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 22ರಲ್ಲಿ ಅಧಿಕಾರಿಯ ಮೇಲೆ ಬಿಜೆಪಿ ನಾಯಕ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಇದಲ್ಲದೆ ಹಲ್ಲೆಯಲ್ಲಿ ಇತರರು ಭಾಗಿಯಾಗಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಧರ್ಮನಗರದ ಸಹಾಯಕ ಚುನಾವಣಾಧಿಕಾರಿ ಆರೋಪಿ ಕಾಜಲ್ ದಾಸ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಚುನಾವಣಾ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್‌ಗಳ ವರದಿ ಮತ್ತು ವೈರಲ್ ವಿಡಿಯೋ ಆಧರಿಸಿ ತನಿಖೆ ನಡೆಸಲಾಗಿದೆ ಎಂದು ಕಡಮತಾಳ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಜಯಂತ ದೇಬನಾಥ್ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 353, 332, ಮತ್ತು 131 ಹಾಗೂ ಐಪಿಸಿ ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ತನ್ನದೇ ಹಾದಿಯಲ್ಲಿ ನಡೆಯಲಿದೆ, ಪೊಲೀಸರು ಈ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.