
ನವದೆಹಲಿ, ಏ. 20: ಸುಪ್ರೀಂಕೋರ್ಟ್ ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ ‘ಚುನಾವಣಾ ಬಾಂಡ್ ಯೋಜನೆ’ಯನ್ನು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಪ್ರತಿಪಕ್ಷಗಳು ‘ಸ್ವತಂತ್ರ ಭಾರತದ ಅತಿದೊಡ್ಡ ಹಗರಣ’ ಎಂದು ಟೀಕಿಸಿದ್ದ ವಿವಾದಾತ್ಮಕ ಯೋಜನೆಯನ್ನು ಮತ್ತೆ ಜಾರಿಗೆ ತರುವ ಬಗ್ಗೆ ಹಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಸೀತರಾಮನ್, ಚುನಾವಣಾ ಬಾಂಡ್ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ ಮರುಪರಿಶೀಲನೆಗೆ ಕೋರುತ್ತದೆಯೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಈ ಕುರಿತು ಸ್ವೀಕಾರಾರ್ಹವಾಗಿರುವ ಚೌಕಟ್ಟನ್ನು ರೂಪಿಸಲು ಅಥವಾ ತರಲು ನಾವು ಏನು ಮಾಡಬೇಕೆಂದು ನೋಡಬೇಕು ಎಂದು ಹೇಳಿದ್ದಾರೆ. ‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ಬಾಂಡ್ಗಳ ಅನುಪಸ್ಥಿತಿಯು ನಗದು ದೇಣಿಗೆಯನ್ನು ಹೆಚ್ಚಿಸುತ್ತದೆ, ಚುನಾವಣಾ ಬಾಂಡ್ಗಳು ರಾಜಕೀಯ ನಿಧಿ ಸಂಗ್ರಹಕ್ಕಿರುವ ಉತ್ತಮ ವಿಧಾನವಾಗಿದೆ ಮತ್ತು ಅದರಲ್ಲಿ ಯಾವುದೇ ನಕಾರಾತ್ಮಕತೆಗಳಿದ್ದರೂ ಸುಲಭವಾಗಿ ಸರಿಪಡಿಸಬಹುದು ಎಂದು ಜನರು ಅರಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ಚುನಾವಣಾ ಬಾಂಡ್ಗಳನ್ನು ವಾಪಸ್ ತರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ನಾವು ಯಾವುದೇ ಮಸೂದೆಯನ್ನು ತರುತ್ತೇವೆ ಎಂದು ಹೇಳುತ್ತಿಲ್ಲ ಆದರೆ ಇದಕ್ಕೆ ಸ್ವಲ್ಪ ಪರಿಹಾರವನ್ನು ಕಂಡುಹಿಡಿಯಬೇಕು ಏಕೆಂದರೆ ನಾವು ರಾಜಕೀಯ ನಿಧಿಯನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ರಾಜಕೀಯದಲ್ಲಿರುವ ಕಪ್ಪುಹಣವನ್ನು ತೊಡೆದು ಹಾಕುತ್ತೇವೆ, ಇದು 2014ರಿಂದ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ನೀಡಿದ ಭರವಸೆಯಾಗಿದೆ ಎಂದು ಹೇಳಿದ್ದರು.
ಚುನಾವಣೆಗೆ ಕಪ್ಪುಹಣ ಹರಿಯುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು. ಚುನಾವಣಾ ಬಾಂಡ್ ಯೋಜನೆಯಲ್ಲಿ ಪರಿಚಯಿಸಲಾದ ರಾಜಕೀಯ ನಿಧಿಯ ಮೂಲಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸದಿರುವುದು ಕಪ್ಪುಹಣವನ್ನು ತಡೆಯಲು ಹೇಗೆ ಸಹಾಯ ಮಾಡುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೇಂದ್ರ ಸರ್ಕಾರವನ್ನು ಈ ಹಿಂದೆ ಪ್ರಶ್ನಿಸಿದ್ದರು. ಈ ವಿಚಾರದಿಂದ ಬಿಜೆಪಿಗೆ ಹಿನ್ನೆಡೆ ಉಂಟಾಗಿಲ್ಲ ಮತ್ತು ಈ ವಿಚಾರವಾಗಿ ವಿವಾದ ಮಾಡುವವರು ಪಶ್ಚಾತ್ತಾಪ ಪಡುತ್ತಾರೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ಹಣದ ಜಾಡನ್ನು 2014ರ ಮೊದಲು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಚುನಾವಣಾ ಬಾಂಡ್ಗಳನ್ನು ಯಾರು ಖರೀದಿಸಿದರು, ಅದು ಎಲ್ಲಿಗೆ ಹೋಯಿತು ಮತ್ತು ಅದನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬ ವಿವರಗಳನ್ನು ಸಾರ್ವಜನಿಕರಿಗೆ ನೀಡಲು ಚುನಾವಣಾ ಬಾಂಡ್ನಿಂದ ಸಾಧ್ಯವಾಯಿತು ಎಂದು ಹೇಳಿದ್ದರು.