ಮಧ್ಯ ಪ್ರದೇಶ ನರ್ಸಿಂಗ್ ಕಾಲೇಜು ಹಗರಣ: ಲಂಚ ಪಡೆದ ಸಿಬಿಐ ಅಧಿಕಾರಿಗಳು
ಭೂಪಾಲ್, ಮೇ 22: ಮಧ್ಯ ಪ್ರದೇಶದ ನರ್ಸಿಂಗ್ ಕಾಲೇಜು ಹಗರಣಕ್ಕೆ ಸಂಬಂಧಿಸಿದಂತೆ ನಡೆಸಿದ ಪರಿಶೀಲನೆಯಲ್ಲಿ ತಮ್ಮ ಅಧಿಕಾರಿಗಳೇ ಪೂರಕ ವರದಿ ನೀಡಲು ಪ್ರತಿ ಸಂಸ್ಥೆಯಿಂದ 2-10 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿರುವುದು ಬಯಲಾಗಿದೆ ಎಂದು ಕೇಂದ್ರೀಯ ತನಿಖಾ ತಂಡ (ಸಿಬಿಐ) ಹೇಳಿದೆ.
ಮಧ್ಯ ಪ್ರದೇಶ ಪೊಲೀಸ್ ಇಲಾಖೆಯಿಂದ ಸಿಬಿಐಗೆ ನಿಯೋಜನೆ ಮೇಲೆ ಬಂದಿರುವ ಇನ್ಸ್‌ಪೆಕ್ಟರ್‌ಗಳಾದ ರಾಹುಲ್ ರಾಜ್, ಸುಶೀಲ್ ಕುಮಾರ್ ಮಜೋಕಾ ಮತ್ತು ರಿಷಿ ಕಾಂತ್ ಅಸಾಥೆ ಸೇರಿದಂತೆ 22 ಮಂದಿಯ ವಿರುದ್ದ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ರಾಹುಲ್ ರಾಜ್‌ನನ್ನು ಭಾನುವಾರ ಬಂಧಿಸಿದೆ ಎಂದು ಸಿಬಿಐನ ಉಪ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ಪ್ರಸಾದ್ ತಿಳಿಸಿದ್ದಾರೆ.
ಸಿಬಿಐ ಎಫ್‌ಐಆರ್‌ನಲ್ಲಿ ನರ್ಸಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ 8 ಕಾಲೇಜುಗಳ ನಿರ್ದೇಶಕರು, ಅಧ್ಯಕ್ಷರು ಮತ್ತು ತಪಾಸಣಾ ತಂಡಗಳ ಪರವಾಗಿ ಲಂಚ ಸಂಗ್ರಹಿಸಿದ ಸಿಬ್ಬಂದಿ ಮತ್ತು ಮಧ್ಯವರ್ತಿಗಳನ್ನು ಹೆಸರಿಸಿದೆ. ಸಿಬಿಐ ದಾಖಲಿಸಿದ ಪ್ರಕರಣ, ಸಂಸ್ಥೆ ಭ್ರಷ್ಟಾಚಾರದ ವಿರುದ್ದ ಶೂನ್ಯ-ಸಹಿಷ್ಣು ನೀತಿಯನ್ನು ಹೊಂದಿದೆ. ಸಂಸ್ಥೆಯ ಮೌಲ್ಯಗಳಿಂದ ವಿಮುಖರಾಗುವ ತನ್ನ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂಬುವುದನ್ನು ತೋರಿಸುತ್ತದೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶದ ಮೇರೆಗೆ ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ತಪಾಸಣೆ ನಡೆಸಲು ಸಿಬಿಐ ತಂಡವನ್ನು ರಚಿಸಿತ್ತು. ಇದರಲ್ಲಿ ಸಿಬಿಐ ಅಧಿಕಾರಿಗಳ ಜೊತೆಗೆ ಭಾರತೀಯ ನರ್ಸಿಂಗ್ ಕೌನ್ಸಿಲ್‌ನಿಂದ ನಾಮನಿರ್ದೇಶನಗೊಂಡ ಸಿಬ್ಬಂದಿ ಮತ್ತು ರಾಜ್ಯದ ಅಧಿಕಾರಿಗಳು ಇದ್ದಾರೆ. ನರ್ಸಿಂಗ್ ಕಾಲೇಜು ಹಗರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳಿಗೆ ಪೂರಕವಾಗಿ ವರದಿ ನೀಡಲು ತಮ್ಮ ಅಧಿಕಾರಿಗಳೇ ಲಂಚ ಪಡೆದಿದ್ದಾರೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ತಪಾಸಣೆ ತಂಡ ಎಫ್‌ಐಆರ್ ದಾಖಲಿಸಿದೆ. ಪ್ರತಿ ನರ್ಸಿಂಗ್ ಕಾಲೇಜಿನಿಂದ ಮಧ್ಯವರ್ತಿಗಳ ಮೂಲಕ 2 ರಿಂದ 10 ಲಕ್ಷದವರೆಗೆ ಹಣ ಸಂಗ್ರಹಿಸುತ್ತಿದ್ದ ಸಿಬಿಐ ಅಧಿಕಾರಿಗಳು, ಮಧ್ಯವರ್ತಿಗಳಿಗೆ 25 ರಿಂದ 50 ಸಾವಿರದವರೆಗೆ ನೀಡುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.