ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ

ಕಾನ್ಪುರ, ಮಾ. 1: ಉತ್ತರ ಪ್ರದೇಶದ ಕಾನ್ಪುರ ಬಳಿಯ ಘಟಮ್ಪುರದಲ್ಲಿ ಇಬ್ಬರು ಬಾಲಕಿಯರ ಮೃತದೇಹಗಳು ಮರವೊಂದರಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬಾಲಕಿಯರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಕಾರ್ಖಾನೆ ಸಮೀಪದ ಹೊಲದಲ್ಲಿರುವ ಮರದಲ್ಲಿ ಮೃತದೇಹಗಳು ನೇತಾಡುತ್ತಿತ್ತು ಎಂದು ವರದಿಗಳು ಹೇಳಿವೆ. ಬಾಲಕಿಯರ ಮೇಲೆ ಕೆಲ ದಿನಗಳ ಹಿಂದೆ ಅತ್ಯಾಚಾರ ನಡೆದಿತ್ತು ಎಂದು ಆರೋಪಿಸಲಾಗಿದೆ.

ಕೆಲ ದಿನಗಳ ಹಿಂದೆ ಇಟ್ಟಿಗೆ ಕಾರ್ಖಾನೆಯ ಗುತ್ತಿಗೆದಾರ ರಾಮರೂಪ್ ನಿಶಾದ್ (48), ಆತನ ಮಗ ರಾಜು (18) ಮತ್ತು ಸೋದರಳಿಯ ಸಂಜಯ್ (19) ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಹೆಚ್ಚುವರಿ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದ್ರ ತಿಳಿಸಿದ್ದಾರೆ.
ಮೃತ ಬಾಲಕಿಯರು ಬುಧವಾರ ನಾಪತ್ತೆಯಾಗಿದ್ದರು. ಅಂದು ಸಂಜೆ ಅವರ ದೇಹಗಳು ಇಟ್ಟಿಗೆ ಕಾರ್ಖಾನೆಯಿಂದ 400 ಮೀಟರ್ ದೂರದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ನಿವಾಸಿಗಳಾಗಿರುವ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನಾವು ಆರೋಪಿಗಳ ಮೊಬೈಲ್‌ಗಳಿಂದ ಬಾಲಕಿಯರ ಫೋಟೋ, ವಿಡಿಯೋಗಳನ್ನು ವಶಪಡಿಸಿಕೊಂಡಿದ್ದೇವೆ. ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಎಸಿಪಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ. ಬಾಲಕಿಯರ ಸಾವಿನ ನಿಖರವಾದ ಕಾರಣ ಕಂಡುಹಿಡಿಯಲು ಮತ್ತು ಸಾಮೂಹಿಕ ಅತ್ಯಾಚಾರದ ಆರೋಪಗಳ ಕುರಿತು ಪರಿಶೀಲಿಸಲು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾಲಕಿಯ ಸಾವಿನ ಕುರಿತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮರಕ್ಕೆ ನೇತು ಹಾಕಲಾಗಿದೆ. ಇದು ಬಿಜೆಪಿ ಆಡಳಿತದ ಯುಪಿಯಲ್ಲಿ ಆಗಿರುವುದರಿಂದ ಯಾವುದೇ ಮಹಿಳಾ ಆಯೋಗ, ಎಸ್‌ಸಿ ಆಯೋಗ, ಎನ್‌ಹೆಚ್‌ಆರ್‌ಸಿ ಮತ್ತು ಮಕ್ಕಳ ಆಯೋಗ ಘಟನಾ ಸ್ಥಳಕ್ಕೆ ಧಾವಿಸಿಲ್ಲ. ಬಾಲಕಿಯರ ನ್ಯಾಯಕ್ಕಾಗಿ ನಾವೇನಾದರು ಆಗ್ರಹಿಸಿದರೆ ಯುಎಪಿಎ ಅಡಿ ಪ್ರಕರಣ ದಾಖಲಿಸಬಹುದು. ಗೋದಿ ಮಾಧ್ಯಮಗಳೂ ಮೌನವಹಿಸಿವೆ ಎಂದಿದ್ದಾರೆ.

Previous Post
ಶಿಕ್ಷೆ ಕಡಿತ ಕೋರಿದ್ದ ಆಸಾರಾಂ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌
Next Post
ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 46 ಸಾವು

Recent News