Rape case registered against Malayalam actor Siddique

ಮಲಯಾಳಂ ನಟ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Rape case registered against Malayalam actor Siddique
Rape case registered against Malayalam actor Siddique

ತಿರುವನಂತಪುರಂ, ಆ. 28: ಯುವ ನಟಿಯ ದೂರಿನ ಮೇರೆಗೆ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟ ಸಿದ್ದೀಕ್ ವಿರುದ್ಧ ಕೇರಳ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. 2016ರಲ್ಲಿ ಸಿದ್ದೀಕ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ನಟಿಯೊಬ್ಬರು ಆರೋಪಿಸಿದ್ದರು. ಅದೇ ನಟಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರು ಆಧರಿಸಿ ತಿರುವನಂತಪುರಂನ ಮ್ಯೂಸಿಯಂ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಸಿದ್ದೀಕ್ ವಿರುದ್ದ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕ್ರಿಮಿನಲ್ ಕಾನೂನು ಐಪಿಸಿ ಈಗ ಬಿಎನ್‌ಎಸ್ ಆದರೂ, 2016ರಲ್ಲೇ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿರುವುದರಿಂದ ಐಪಿಸಿ ಅಡಿಯೇ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿದ್ದೀಕ್, ತನ್ನ ವಿರುದ್ದ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜೀನಾಮೆ ನೀಡಿದ್ದರು.

ಸಿದ್ದೀಕ್ ರೀತಿಯೇ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ವಿರುದ್ದವೂ ಬೆಂಗಾಲಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ. ಮಲಯಾಳಂ ನಟರಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಶಾಸಕ ಹಾಗೂ ನಟ ಮುಖೇಶ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಮುಖ ನಾಯಕ ಇಡವೇಳ ಬಾಬು ವಿರುದ್ದ ನಟಿ ಮಿನು ಮುನೀರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಎಲ್ಲರ ವಿರುದ್ದ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಮಲಯಾಳಂ ಚಿತ್ರರಂಗದ ಜೂನಿಯರ್ ಕಲಾವಿದೆಯೊಬ್ಬರು ಪ್ರಶಸ್ತಿ ವಿಜೇತ ನಟ ಮತ್ತು ನಿರ್ದೇಶಕ ಬಾಬುರಾಜ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ನಿನ್ನೆ (ಆ.27) ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದು, ಸಮಿತಿಯನ್ನು ವಿಸರ್ಜಿಸಲಾಗಿದೆ.

ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಕುರಿತ ಆಫಾತಕಾರಿ ವಿಷಯಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಇತ್ತೀಚೆಗೆ ಬಿಚ್ಚಿಟ್ಟಿತ್ತು. ಆ ಬಳಿಕ ಒಬ್ಬೊಬ್ಬರಾಗಿಯೇ ನಟಿಯರು ನಟರ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪಗಳ ತನಿಖೆಗೆ ಕೇರಳ ಸರ್ಕಾರ ಏಳು ಮಂದಿ ಪೊಲೀಸರ ವಿಶೇಷ ತಂಡವನ್ನು ರಚಿಸಿದೆ. ಈ ತಂಡದಲ್ಲಿ ನಾಲ್ವರು ಮಹಿಳಾ ಐಪಿಎಸ್ ಅಧಿಕಾರಿಗಳೂ ಇದ್ದಾರೆ.

Previous Post
ಸೇನಾ ವಾಹನ ಕಂದಕಕ್ಕೆ ಬಿದ್ದು 3 ಸೈನಿಕರು ಸಾವು
Next Post
ಗುಜುರಾತ್ ನಲ್ಲಿ ಭಾರಿ ಮಳೆ 15 ಮಂದಿ ಸಾವು

Recent News