ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ಗೆ ಚು. ಆಯೋಗ ಛಿಮಾರಿ
ನವದೆಹಲಿ : ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಅವರಿಗೆ ಚುನಾವಣಾ ಆಯೋಗ ಛೀಮಾರಿ ಹಾಕಿದೆ. ಇಬ್ಬರೂ ನಾಯಕರ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಆಯೋಗ ಎಚ್ಚರಿಕೆ ನೀಡಿದ್ದು, ಚುನಾವಣಾ ಸಮಯದಲ್ಲಿ ಆಯೋಗವು ಅವರ ಮೇಲೆ ವಿಶೇಷ ನಿಗಾ ಇಡಲಿದೆ ಎಂದು ತಿಳಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿದ ಹಿನ್ನಲೆ ಚುನಾವಣಾ ಆಯೋಗ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಗೆ ಉತ್ತರಿಸಿದ ಉಭಯ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಉತ್ತರವನ್ನು ಸ್ವೀಕರಿಸಿದ ನಂತರ ಆಯೋಗವು ಉಭಯ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಮುಂದೆ ಇಂತಹ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಬೇಕು ಅಲ್ಲದೆ, ಚುನಾವಣಾ ಸಮಯದಲ್ಲಿ ಇಬ್ಬರೂ ನಾಯಕರ ಹೇಳಿಕೆಗಳನ್ನು ಚುನಾವಣಾ ಆಯೋಗವು ವಿಶೇಷವಾಗಿ ಪರಿಶೀಲಿಸುತ್ತದೆ. ಇಬ್ಬರೂ ನಾಯಕರು ಕೀಳು ಮಟ್ಟದ ವೈಯಕ್ತಿಕ ದಾಳಿ ನಡೆಸಿದ್ದು, ಇದು ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.
ಸೋಮವಾರದಿಂದ ಈ ಇಬ್ಬರು ನಾಯಕರ ಚುನಾವಣಾ ಸಂಬಂಧಿತ ಸಂವಹನಗಳ ಮೇಲೆ ಆಯೋಗವು ವಿಶೇಷ ಮತ್ತು ಹೆಚ್ಚುವರಿ ನಿಗಾ ಇರಿಸಲಿದೆ. ಇದೇ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡುವಂತೆ ಆಯೋಗವು ಆಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸೂಚನಾ ಪ್ರತಿಯನ್ನು ಕಳುಹಿಸಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ನ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯವಾಗಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿವ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಕಾರಣವಾಗಿತ್ತು. ಬಿಜೆಪಿ ಸಂಸದ ದಿಲೀಪ್ ಘೋಷ್ ಅವರು ಚುನಾವಣಾ ಪ್ರಚಾರದ ವೇಳೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.