ಮಾಧವಿ ಲತಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು

ಮಾಧವಿ ಲತಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು

ಹೈದರಾಬಾದ್, ಮೇ 15: ಮತದಾರರನ್ನು ಬೆದರಿಸುವ ಮತ್ತು ಸಾಮರಸ್ಯಕ್ಕೆ ಭಂಗ ತಂದಿರುವ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಮಾಧವಿ ಲತಾ ಮತ್ತು ಬಿಜೆಪಿ ಪಕ್ಷದ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ತೆಲಂಗಾಣ ಫಾರ್ ಪೀಸ್ ಅಂಡ್ ಯೂನಿಟಿ (ಟಿಪಿಯು) ಮಂಗಳವಾರ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. 44 ಸಾಮಾಜಿಕ ಹಕ್ಕುಗಳ ಕಾರ್ಯಕರ್ತರು ಸಹಿ ಮಾಡಿದ ದೂರಿನಲ್ಲಿ, ಮುಸ್ಲಿಂ ಮಹಿಳಾ ಮತದಾರರು ಮುಸುಕು ತೆಗೆಯುವಂತೆ ಒತ್ತಾಯಿಸಿ, ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸುವುದು ಮತ್ತು ಅವರ ಗುರುತನ್ನು ಪ್ರಶ್ನಿಸಿರುವುದು ಮುಸ್ಲಿಂ ಮಹಿಳಾ ಮತದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಮಾಧವಿ ಲತಾ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರೆ, 1961ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಯಮ 35ರಡಿಯಲ್ಲಿ ಮಾಧವಿ ಲತಾ ವರ್ತನೆ ಶಿಕ್ಷಾರ್ಹವಾಗಿದೆ ಎಂದು ಹೇಳಲಾಗಿದೆ. ಮತದಾರರಿಗೆ ಗುರುತಿನ ಚೀಟಿ ಕಾಯ್ದೆಯಡಿ ವಿತರಿಸಲಾಗಿರುವ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಅಧಿಕಾರ ಕೇವಲ ಚುನಾವಣಾಧಿಕಾರಿ ಅಥವಾ ಅಧಿಕೃತ ಮತಗಟ್ಟೆ ಅಧಿಕಾರಿಗೆ ಮಾತ್ರವಿದೆ. ಆದ್ದರಿಂದ 1961ರ ಪ್ರಜಾ ಪ್ರತಿನಿಧಿ ಕಾಯ್ದೆಯ ನಿಯಮ 35ರ ಅಡಿ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ನಿಯಮಗಳ ಪ್ರಕಾರ, ವ್ಯಕ್ತಿಯೊಬ್ಬರ ಗುರುತನ್ನು ಪ್ರಶ್ನಿಸುವ ಅಧಿಕಾರ ಕೇವಲ ಚುನಾವಣಾಧಿಕಾರಿ ಅಥವಾ ಅವರಿಗೆ ನೆರವು ನೀಡಲು ನೇಮಕಗೊಂಡಿರುವ ನಿರ್ದಿಷ್ಟ ಉದ್ಯೋಗಿಗಳು ಅಥವಾ ಮತಗಟ್ಟೆ ಏಜೆಂಟ್‌ಗಳಿಗೆ ಮಾತ್ರವಿದೆ. ಮಾಧವಿ ಲತಾ ಅವರು ಮತದಾರರನ್ನು ಬೆದರಿಸಲು, ಗುರುತನ್ನು ಹೇಳುವಂತೆ ಒತ್ತಾಯಿಸಲು, ಗುರುತಿನ ಚೀಟಿಗಳನ್ನು ತೆಗೆದುಕೊಳ್ಳಲು, ವೈಯಕ್ತಿಕ ಮಾಹಿತಿಯ ಪ್ರಶ್ನೆಗಳನ್ನು ಕೇಳಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮತ್ತು ತಲೆಗೆ ಸ್ಕಾರ್ಫ್ ಧರಿಸಿದ್ದ ಮುಸ್ಲಿಂ ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ, ಇದು ಕೇವಲ ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶವನ್ನು ಹೊಂದಿದೆ ಎಂದು ಕೂಡ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನದ ದಿನ ಹೈದರಾಬಾದ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ, ಆಝಂಪುರದ ಮತಗಟ್ಟೆ ಸಂಖ್ಯೆ 122ಕ್ಕೆ ತೆರಳಿ ಮುಸ್ಲಿಂ ಮಹಿಳೆಯರ ಬುರ್ಖಾದ ಸ್ಕಾರ್ಫ್‌ ತೆಗೆಸಿ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

Previous Post
ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ
Next Post
ಇವಿಎಂ ಸಂಖ್ಯೆಗಳ ವ್ಯತ್ಯಾಸ: ಪಾರದರ್ಶಕತೆ ಬಗ್ಗೆ ಕಳವಳ

Recent News