ಮಾರ್ಕೇಂಡೇಯ ಆಣೆಕಟ್ಟು ನಿರ್ಮಾಣ ಪ್ರಕರಣ ಎಂಟು ವಾರಗಳಲ್ಲಿ ಸಂಧಾನ ಸಮಿತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

ಮಾರ್ಕೇಂಡೇಯ ಆಣೆಕಟ್ಟು ನಿರ್ಮಾಣ ಪ್ರಕರಣ ಎಂಟು ವಾರಗಳಲ್ಲಿ ಸಂಧಾನ ಸಮಿತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

ನವದೆಹಲಿ : ಮಾರ್ಕೇಂಡೇಯ ಆಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಮಂಡಳಿ ಸ್ಥಾಪನೆಗೆ ಒತ್ತಾಯಿಸಿದ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಂಧಾನ ಸಮಿತಿ ವರದಿ ಸಲ್ಲಿಕೆಗೆ ಎಂಟು ವಾರಗಳ ಸಮಯ ನೀಡಿದೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಕೋರ್ಟ್ ನಿರ್ದೇಶನ ಅನ್ವಯ ಸಂಧಾನ ಸಮಿತಿ ರಚಿಸಿದೆ, ಈಗಾಗಲೇ ಐದು ಸಭೆಗಳನ್ನು ನಡೆಸಿದೆ ಅಲ್ಲದೇ ಸ್ಥಳ ಪರಿಶೀಲನೆ ನಡೆಸಿದ್ದು ಅದರ ವರದಿ ಸಲ್ಲಿಕೆಗೆ ಆರರಿಂದ ಎಂಟು ವಾರ ಸಮಯ ಬೇಕು ಎಂದು ಮನವಿ ಮಾಡಿದರು. ಆದರೆ ಕೇಂದ್ರ ಸರ್ಕಾರದ ವಾದಕ್ಕೆ ತಮಿಳುನಾಡು ಪರ ವಕೀಲರು ವಿರೋಧ ಮಾಡಿದರು. ಪ್ರಕರಣ ಶೀಘ್ರ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ನ್ಯಾಯಧಿಶರು, ಸಭೆ ಮತ್ತು ಸ್ಥಳ ಪರಿಶೀಲನೆಯಾಗಿದೆ ವರದಿ ಸಲ್ಲಿಸುವ ವರೆಗೂ ಕಾಯಿರಿ ಎಂದು ಸೂಚಿಸಿ ಎಂಟು ವಾರಗಳಿಗೆ ಪ್ರಕರಣ ಮುಂದೂಡಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದರು. ಕರ್ನಾಟಕದ ಪರ ಹಿರಿಯ ವಕೀಲ ಮೋಹನ್ ಕಾತರಕಿ ವಾದ ಮಂಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಉಗಮವಾದ ಮಾರ್ಕಂಡೇಯ ನದಿ, ಕರ್ನಾಟಕದ ಕೋಲಾರ, ಹೊಸಕೋಟೆ, ಕಾಡುಗೋಡಿ, ಬಾಗಲೂರು, ಹೊಸೂರಿನ ಮೂಲಕ ಹರಿದು ತಮಿಳುನಾಡಿನ ಪೊನ್ನೈಯಾರ್‌ ನದಿಯನ್ನು ಸೇರುತ್ತದೆ.

ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ, ಕರ್ನಾಟದಲ್ಲಿ ದಕ್ಷಿಣ ಪಿನಾಕಿನಿ ಎಂದು ಕರೆಯಲ್ಪಡುವ ಪೊನ್ನೈಯಾರ್‌ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟು ಯೋಜನೆ ವಿರುದ್ಧ ತಮಿಳುನಾಡು ಖ್ಯಾತೆ ತೆಗೆದಿದ್ದು, ನ್ಯಾಯಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

Previous Post
ಕರ್ನಾಟಕದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ತಮಿಳುನಾಡು ಚಿಂತನೆ
Next Post
ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣ ಹೆಚ್‌ಡಿಕೆ, ಎಸ್‌ಎಂಕೆ ಅರ್ಜಿ ವಿಚಾರಣೆ ಮುಂದೂಡಿಕೆ

Recent News