ಮಾಲೆಗಾಂವ್ ಸ್ಫೋಟ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಾರೆಂಟ್‌ ಜಾರಿ

ಮಾಲೆಗಾಂವ್ ಸ್ಫೋಟ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಾರೆಂಟ್‌ ಜಾರಿ

ಮುಂಬೈ, ಮಾ. 12: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗದ ಕಾರಣ ವಾರೆಂಟ್ ಜಾರಿಗೊಳಿಸಿದೆ. ವಿಶೇಷ ನ್ಯಾಯಮೂರ್ತಿ ಎ.ಕೆ. ಲಾಹೋಟಿ, ಪ್ರಜ್ಞಾ ಸಿಂಗ್ ಠಾಕೂರ್‌ಗೆ 10 ಸಾವಿರ ಮೊತ್ತದೊಂದಿಗೆ ವಾರಂಟ್‌ ಜಾರಿಗೊಳಿಸಿದ್ದು, ಮಾರ್ಚ್ 20ರ ಹೊತ್ತಿಗೆ ವಿಚಾರಣೆಯ ಕುರಿತ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ನಿಯಮಗಳ ಅಡಿಯ ಪ್ರಕರಣದಲ್ಲಿ ಠಾಕೂರ್ ಹಾಗೂ ಇತರ ಆರು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಎನ್‌ಐಎ ಪ್ರಸಕ್ತ ಸಿಆರ್ಪಿಸಿ ಅಡಿಯಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ.
ಪ್ರಜ್ಞಾ ಸಿಂಗ್ ಠಾಕೂರ್‌ನ್ನು ಪ್ರತಿನಿಧಿಸಿದ ವಕೀಲ ಪ್ರಶಾಂತ್ ಮಗ್ಗು, ವೈದ್ಯಕೀಯ ಪ್ರಮಾಣಪತ್ರದೊಂದಿಗೆ ವಿನಾಯಿತಿ ಅರ್ಜಿಯನ್ನು ಸಲ್ಲಿಸಿದ್ದಾರೆ, ಅವರು ಅಸ್ವಸ್ಥರಾಗಿರುವ ಕಾರಣ ಭೋಪಾಲ್ ಸಂಸದರು ನ್ಯಾಯಾಲಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಕೋರ್ಟ್‌ನಲ್ಲಿ ಹೇಳಿಕೊಂಡಿದ್ದರು. ಆದರೆ, ವಿನಾಯಿತಿ ಅರ್ಜಿಗೆ ಲಗತ್ತಿಸಲಾದ ವೈದ್ಯಕೀಯ ಪ್ರಮಾಣಪತ್ರವು ಕೇವಲ ಫೋಟೋಕಾಪಿಯಾಗಿದ್ದು, ವೈದ್ಯರು ನೀಡಿದ ಮೂಲ ದಾಖಲೆಯಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಈ ಮೊದಲೇ ಪ್ರಜ್ಞಾ ಠಾಕೂರ್‌ಗೆ ಕೋರ್ಟ್ ಎಚ್ಚರಿಕೆ ನೀಡಿತ್ತು.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯು ಅಂತಿಮ ಹಂತದಲ್ಲಿದೆ. ನ್ಯಾಯಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 313ರಡಿಯಲ್ಲಿ ಪ್ರಕರಣದ ಆರೋಪಿಗಳ ಹೇಳಿಕೆಗಳನ್ನು ದಾಖಲಿಸುತ್ತಿದೆ. ಪ್ರಜ್ಞಾ ಠಾಕೂರ್ ತನ್ನ ವಿರುದ್ಧದ ವಾರಂಟ್ ರದ್ದುಪಡಿಸಲು ಮಾರ್ಚ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 29, 2008ರಂದು ಮಹಾರಾಷ್ಟ್ರದ ಮಾಲೆಗಾಂವ್‌ನ ಮಸೀದಿಯೊಂದರ ಬಳಿ ಮೋಟಾರ್‌ಸೈಕಲ್‌ಗೆ ಕಟ್ಟಲಾದ ಸ್ಫೋಟಕ ಸಾಧನವು ಸ್ಫೋಟಗೊಂಡಿದ್ದು, ಆರು ಜನರು ಸಾವನ್ನಪ್ಪಿದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2011ರಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಅದಕ್ಕೂ ಮೊದಲು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಹಾಲಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯ, ಅಜಯ್ ರಹೀರ್‌ಕರ್, ಸುಧಾಕರ್ ಚತುರ್ವೇದಿ, ಸುಧಾಕರ್ ದ್ವಿವೇದಿ ಹಾಗೂ ಸಮೀರ್ ಕುಲಕರ್ಣಿಯನ್ನು ಐಪಿಸಿ ಹಾಗೂ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಡಿಸೆಂಬರ್ 2018ರಿಂದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈವರೆಗೆ 323ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಎಲ್ಲರ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ. ಸದ್ಯದ ಮಟ್ಟಿಗೆ ಸರ್ಕಾರಿ ಪರ ವಕೀಲರ ಸಾಕ್ಷ್ಯ ಸಂಗ್ರಹ ಮುಕ್ತಾಯಗೊಂಡಿದ್ದು, ಆರೋಪಿಗಳು ಈ ಸಾಕ್ಷ್ಯಗಳ ವಿರುದ್ಧವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿದೆ.

Previous Post
ಮೋದಿ ದಯವಿಟ್ಟು ಮಣಿಪುರಕ್ಕೆ ಒಮ್ಮೆ ಬನ್ನಿ: ಸಂಚಲನ ಸೃಷ್ಟಿಸಿದ ಫೈಟರ್ ವಿಡಿಯೋ
Next Post
ಅರ್ಜಿ ಸಲ್ಲಿಸದವರಿಗೆ ಪೌರತ್ವ ಕೊಟ್ಟರೆ ರಾಜೀನಾಮೆ ನೀಡುವೆ: ಅಸ್ಸಾಂ ಮುಖ್ಯಮಂತ್ರಿ ಘೋಷಣೆ

Recent News