ಮಾಸ್ಕೋಗೆ ತೆರಳುವ ಮೋದಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ: ಕಾಂಗ್ರೆಸ್

ಮಾಸ್ಕೋಗೆ ತೆರಳುವ ಮೋದಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ: ಕಾಂಗ್ರೆಸ್

ನವದೆಹಲಿ, ಜು. 8: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಜನಾಂಗೀಯ ಸಂಘರ್ಷ ಉಂಟಾದ ಬಳಿಕ ಮಣಿಪುರಕ್ಕೆ ಹೋಗುವ ಆಸಕ್ತಿಯನ್ನೂ ಹೊಂದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್ ಅವರು ಇಂದು ಲೋಕಸಭೆಯ ವಿಪಕ್ಷ ನಾಯಕರು ಅಸ್ಸಾಂ ಹಾಗೂ ಮಣಿಪುರಕ್ಕೆ ಭೇಟಿ ಕೊಟ್ಟರೆ, ಜೈವಿಕವಾಗಿ ಜನಿಸಿಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿ ಮಾಸ್ಕೋಗೆ ತೆರಳಿದ್ದಾರೆ. ಜೈವಿಕವಲ್ಲದ ಪ್ರಧಾನಿಯ ಹೊಗಳುಭಟ್ಟರು ಕೆಲ ಕಾಲ ರಷ್ಯಾ- ಉಕ್ರೇನ್‌ ಯುದ್ಧವನ್ನೇ ನಿಲ್ಲಿಸಿದರೆಂದು ಸಮರ್ಥಿಸಿಕೊಳ್ಳುತ್ತಾರೆ. ಬಹುಶಃ ಈ ಮಾಸ್ಕೋ ಪ್ರವಾಸ ಇನ್ನಷ್ಟು ವಿಲಕ್ಷಣವಾದ ಘಟನೆಗಳಿಗೆ ಕಾರಣವಾಗಬಹುದು ಎಂದು ಪ್ರಧಾನಿಯನ್ನು ಕುಟುಕಿದ್ದಾರೆ.
ಮಣಿಪುರ ಹೊತ್ತಿ ಉರಿದ 14 ತಿಂಗಳುಗಳಲ್ಲಿ ರಾಹುಲ್‌ ಗಾಂಧಿ ಮೂರು ಬಾರಿ ಭೇಟಿ ನೀಡಿದ್ದಾರೆ. ತಾವು ಜೈವಿಕವಾಗಿ ಜನಿಸಿಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿ ಗಲಭೆ ಶುರುವಾದ 2023, ಮೇ 3 ರಿಂದ ಮಣಿಪುರಕ್ಕೆ ತೆರಳಲು ಕೆಲವು ಗಂಟೆಗಳ ಕಾಲ ಸಮಯವೂ ಮಾಡಿಕೊಳ್ಳುತ್ತಿಲ್ಲ, ಅಲ್ಲಿಗೆ ಹೋಗುವ ಆಸಕ್ತಿಯನ್ನು ಹೊಂದಿಲ್ಲ. ಅಲ್ಲಿ ಇರುವ ತಮ್ಮ ಸ್ವಂತ ಪಕ್ಷದ ಮುಖ್ಯಮಂತ್ರಿಯನ್ನೇ ಅವರು ಭೇಟಿ ಮಾಡಿಲ್ಲ. ಹಾಗೆಯೇ ಇತರ ಪಕ್ಷದ ಶಾಸಕರು, ಸಂಸದರನ್ನು ಕೂಡ ಭೇಟಿಯಾಗಿಲ್ಲ ಎಂದು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಉಂಟಾಗಿರುವ ಅಸ್ಸಾಂ ಹಾಗೂ ಮಣಿಪುರ ರಾಜ್ಯಗಳಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇಂದು ಭೇಟಿ ನೀಡಿದ್ದಾರೆ. ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಣಿಪುರದ ನಿರಾಶ್ರಿತ ಪ್ರದೇಶಗಳ ಜನರನ್ನು ಭೇಟಿಯಾಗಲಿದ್ದಾರೆ. ಸಂಜೆ ಮಣಿಪುರದ ರಾಜ್ಯಪಾಲರಾದ ಅನುಸೂಯ ಊಯ್ಕೆ ಅವರನ್ನು ಭೇಟಿ ಮಾಡಲಿದ್ದಾರೆ. ರಾಹುಲ್‌ ಅವರು ಉತ್ತರ ಪ್ರದೇಶ ರಾಯ್‌ಬರೇಲಿಯಿಂದ ಸಂಸದರಾಗಿ ಆಯ್ಕೆಯಾದ ನಂತರ ಮಣಿಪುರಕ್ಕೆ ಇದು ಮೊದಲ ಭೇಟಿ ಇದಾಗಿದೆ. ಎರಡನೇ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಮಣಿಪುರದಿಂದಲೇ ಪ್ರಾರಂಭಿಸಿದ್ದರು. ಈ ಮೂಲಕ ಸಂಘರ್ಷ ಪೀಡಿತ ರಾಜ್ಯದ ಜನರಿಗೆ ಧೈರ್ಯ ತುಂಬಿ ಅವರ ಸಮಸ್ಯೆ ಆಲಿಸಿದ್ದರು.

Previous Post
ದೃಶ್ಯ ಮಾಧ್ಯಮಗಳಲ್ಲಿ ವಿಕಲಾಂಗ ವ್ಯಕ್ತಿಗಳ ಕುರಿತ ಸ್ಟೀರಿಯೊಟೈಪಿಂಗ್-ತಾರತಮ್ಯ ತಡೆಗಟ್ಟಲು ಸುಪ್ರೀಂ ಮಾರ್ಗಸೂಚಿ
Next Post
15 ನಿಮಿಷದಲ್ಲಿ ಎರಡು ಬಾರಿ ಸಚಿವರಾದ ಶಾಸಕ

Recent News