ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್ ವಜಾಗೊಳಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್ ವಜಾಗೊಳಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

ನವದೆಹಲಿ : ಹೊಸ ಅಬಕಾರಿ ನೀತಿ ಹಗರಣದಲ್ಲಿ ಇಡಿಯಿಂದ ಬಂಧನಕ್ಕೊಳಪಟ್ಟಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ವಿಚಾರಣೆ ವೇಳೆ ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿದೆಯೇ ಎಂದು ಪ್ರಶ್ನಿಸಲಾಯಿತು‌. ನಾವು ಇಂದಿನ ಪತ್ರಿಕೆಯನ್ನು ಓದಿದ್ದೇವೆ, ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ರಾಷ್ಟ್ರಪತಿಗಳು ಪರಿಗಣಿಸಬೇಕು, ನಾವು ಯಾಕೆ ಈ ಅರ್ಜಿಯನ್ನು ವಿಚಾರಣೆ ನಡೆಸಬೇಕು, ಇದನ್ನು ಅವರು ಪರಿಗಣಿಸುತ್ತಾರೆ, ನಾವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಿಲ್ಲ, ಯಾವುದೇ ಹೈಕೋರ್ಟ್ ಅದನ್ನು ಮಾಡುವುದಿಲ್ಲ ಎಂದು ಎಸಿಜೆ ಹೇಳಿದರು.

ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದೆಹಲಿ ನಿವಾಸಿ ಸುರ್ಜಿತ್ ಸಿಂಗ್ ಯಾದವ್ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಣಕಾಸು ಅವ್ಯವಹಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಯಾದವ್ ತಮ್ಮ ಮನವಿಯಲ್ಲಿ ತಿಳಿಸಿದ್ದರು.

ಮುಂದುವರಿದು ಕೇಜ್ರಿವಾಲ್ ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸುವುದರಿಂದ ಕಾನೂನು ಪ್ರಕ್ರಿಯೆಗೆ ಅಡ್ಡಿಯುಂಟಾಗುವುದು ಮತ್ತು ನ್ಯಾಯಾಂಗದ ಹಾದಿಗೆ ಅಡ್ಡಿಯಾಗಲಿದೆ. ಕಾರಾಗೃಹದಲ್ಲಿರುವ ಮುಖ್ಯಮಂತ್ರಿಗಳು ಕಾನೂನು ವಿಧಿಸುವ ಯಾವುದೇ ವ್ಯವಹಾರವನ್ನು ನಡೆಸಲು ಅಸಮರ್ಥರಾಗಿರುತ್ತಾರೆ. ಒಂದು ವೇಳೆ ಅದಕ್ಕೆ ಅನುಮತಿಸಿದರೆ ಸರ್ಕಾರದ ರಹಸ್ಯ ದಾಖಲೆಗಳನ್ನು ಜೈಲು ಅಧಿಕಾರಿಗಳು ಸಂಪೂರ್ಣವಾಗಿ ಸ್ಕ್ಯಾನ್ ಮಾಡಬೇಕಾಗುತ್ತದೆ.

ಇಂತಹ ಕೃತ್ಯವು ಸಂವಿಧಾನದ ಮೂರನೇ ಶೆಡ್ಯೂಲ್ ಅಡಿಯಲ್ಲಿ ಮುಖ್ಯಮಂತ್ರಿಗೆ ಬೋಧಿಸಲಾದ ಗೌಪ್ಯತೆಯ ಪ್ರಮಾಣ ವಚನವನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು. ಆದರೆ ಈ ವಾದ ಪುರಸ್ಕರಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿತು.

Previous Post
ಸಿಜೆಐಗೆ 600ಕ್ಕೂ ಹೆಚ್ಚು ವಕೀಲರ ತಂಡದಿಂದ ಪತ್ರ
Next Post
ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

Recent News