ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ
ನವದೆಹಲಿ, ಮೇ 21: ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು, ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು ರಾಜಕೀಯ ಜಾಹೀರಾತುಗಳನ್ನು ಮೆಟಾ ಅನುಮೋದಿಸಿದೆ ಎನ್ನುವುದನ್ನು ವರದಿಯೊಂದು ಬಹಿರಂಗಪಡಿಸಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮಾಲೀಕತ್ವ ಹೊಂದಿರುವ ಮೆಟಾ ಭಾರತದ ಚುನಾವಣೆಯ ಸಮಯದಲ್ಲಿ AI(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)(ಕೃತಕ ಬುದ್ಧಿಮತ್ತೆ)ಯ ರಾಜಕೀಯ ಜಾಹೀರಾತುಗಳನ್ನು ಅನುಮೋದಿಸಿದೆ. ಆ ಜಾಹೀರಾತುಗಳು ತಪ್ಪು ಮಾಹಿತಿಯನ್ನು ಹರಡಿದೆ ಮತ್ತು ಧಾರ್ಮಿಕ ಹಿಂಸಾಚಾರವನ್ನು ಪ್ರಚೋದಿಸಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.
“ಈ ಕ್ರಿಮಿಕೀಟಗಳನ್ನು ಸುಡೋಣ”, “ಹಿಂದೂ ರಕ್ತ ಚೆಲ್ಲುತ್ತಿದೆ, ಈ ದಾಳಿಕೋರರನ್ನು ಸುಡಬೇಕು” ಎಂಬಂತಹ ಭಾರತದಲ್ಲಿನ ಮುಸ್ಲಿಮರ ವಿರುದ್ಧ ನಿಂದನೆಗಳನ್ನು ಒಳಗೊಂಡಿರುವ ಜಾಹೀರಾತುಗಳನ್ನು ಫೇಸ್‌ಬುಕ್ ಅನುಮೋದಿಸಿದೆ ಮತ್ತು ಕೆಲ ರಾಜಕೀಯ ನಾಯಕರ ಬಗ್ಗೆ ತಪ್ಪು ಮಾಹಿತಿ ಇರುವ ಜಾಹೀರಾತುಗಳನ್ನು ಕೂಡ ಫೇಸ್‌ಬುಕ್ ಅನುಮೋದಿಸಿದೆ. ಇದಲ್ಲದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅನುಮೋದಿಸಿದ ಮತ್ತೊಂದು ಜಾಹೀರಾತಿನಲ್ಲಿ ಪ್ರತಿಪಕ್ಷ ನಾಯಕನ ಮರಣದಂಡನೆಗೆ ಕರೆ ನೀಡಲಾಗಿತ್ತು. ಅದರಲ್ಲಿ ಭಾರತದಿಂದ ಹಿಂದೂಗಳನ್ನು ಅಳಿಸಿಹಾಕುಲು ಅವರು ಬಯಸಿದ್ದಾರೆ ಎಂದು ಸುಳ್ಳಾಗಿ ಬಿಂಬಿಸಲಾಗಿತ್ತು. ಈ ಜಾಹೀರಾತಿನಲ್ಲಿ ಸಂದೇಶದ ಜೊತೆಗೆ ಪಾಕಿಸ್ತಾನ ಧ್ವಜದ ಚಿತ್ರವು ಒಳಗೊಂಡಿತ್ತು.
ಚುನಾವಣಾ ಆಯೋಗದ ನಿರ್ದೇಶನದ ನಂತರ ಬಿಜೆಪಿ ಕರ್ನಾಟಕ ಘಟಕವು ಮುಸ್ಲಿಮರು ಮತ್ತು ಕಾಂಗ್ರೆಸ್ ಬಗ್ಗೆ ಹಂಚಿಕೊಂಡಿರುವ ದ್ವೇಷದ ಅನಿಮೇಟೆಡ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಇತ್ತೀಚೆಗೆ ತೆಗೆದುಹಾಕಿದೆ. ಇದರ ಬೆನ್ನಲ್ಲಿ ಈ ವರದಿ ಬಹಿರಂಗಗೊಂಡಿದೆ.
ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್ (ICWI) ಮತ್ತು ಕಾರ್ಪೋರೇಟ್ ಸಂಸ್ಥೆ ‘Ekō’ ಹಾನಿಕಾರಕ ರಾಜಕೀಯ ವಿಷಯವನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಮೆಟಾದ ಜಾಹೀರಾತು ಗ್ರಂಥಾಲಯಕ್ಕೆ ಈ ಜಾಹೀರಾತುಗಳನ್ನು ಸಲ್ಲಿಸಿದೆ. ಎಲ್ಲಾ ಜಾಹೀರಾತುಗಳು ನಿಜವಾದ ದ್ವೇಷದ ಮಾತು ಮತ್ತು ಭಾರತದಲ್ಲಿ ಪ್ರಚಲಿತದಲ್ಲಿರುವ ತಪ್ಪು ಮಾಹಿತಿಯನ್ನು ಆಧರಿಸಿ ರಚಿಸಲಾಗಿದೆ, ಇಂತಹ ತಪ್ಪು ನಿರೂಪಣೆಗಳನ್ನು ವೃದ್ಧಿಸುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಸಾಮರ್ಥ್ಯವನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಸಂಶೋಧಕರು ಇಂಗ್ಲಿಷ್, ಹಿಂದಿ, ಬೆಂಗಾಲಿ, ಗುಜರಾತಿ ಮತ್ತು ಕನ್ನಡದಲ್ಲಿ 22 ಜಾಹೀರಾತುಗಳನ್ನು ಮೆಟಾಗೆ ಸಲ್ಲಿಸಿದ್ದಾರೆ, ಅದರಲ್ಲಿ 14 ಜಾಹೀರಾತನ್ನು ಅನುಮೋದಿಸಲಾಗಿದೆ. ಇನ್ನೂ ಮೂರು ಜಾಹೀರಾತುಗಳನ್ನು ಸಣ್ಣ ಮಟ್ಟದಲ್ಲಿ ಅನುಮೋದಿಸಲಾಗಿದೆ. ಅನುಮೋದಿತ ಎಲ್ಲಾ ಜಾಹೀರಾತುಗಳಲ್ಲಿ ತಿರುಚಿದ ಚಿತ್ರಗಳನ್ನು ಪತ್ತೆ ಹಚ್ಚಲು ಮೆಟಾ ವಿಫಲವಾಗಿದೆ ಎಂದು ಸಂಶೋಧನೆಯು ಪತ್ತೆ ಹಚ್ಚಿದೆ. ದ್ವೇಷ ಭಾಷಣದ ಕುರಿತು ಮೆಟಾದ ನೀತಿಯನ್ನು ಉಲ್ಲಂಘಿಸಿದ ಮೋದಿಯ ಬಗೆಗಿನ ಒಂದು ಜಾಹೀರಾತು ಸೇರಿ ಐದು ಜಾಹೀರಾತುಗಳನ್ನು ತಿರಸ್ಕರಿಸಲಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಇತರ 14 ಜಾಹೀರಾತುಗಳನ್ನು ಅನುಮೋದಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಜನಾಂಗೀಯವಾದಿಗಳು ಮತ್ತು ನಿರಂಕುಶವಾದಿಗಳು ಕೆಟ್ಟ ದ್ವೇಷದ ಭಾಷಣವನ್ನು ಹರಡಲು ಸಾಮಾಜಿಕ ಮಾದ್ಯಮ ವೇದಿಕೆಯನ್ನು ಬಳಸಬಹುದೆಂದು ತಿಳಿದಿದ್ದಾರೆ, ಮಸೀದಿಗಳ ಸುಡುವ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಹಿಂಸಾತ್ಮಕ ಪಿತೂರಿ ಸಿದ್ಧಾಂತಗಳನ್ನು ಹರಡುತ್ತಾರೆ ಮತ್ತು ಮೆಟಾ ಸಂತೋಷದಿಂದ ಅವರ ಹಣವನ್ನು ತೆಗೆದುಕೊಳ್ಳುತ್ತದೆ, ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಸಂಶೋಧನಾ ವರದಿಯು ತಿಳಿಸಿದೆ.
ಮಾನದಂಡಗಳು ಅಥವಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಜಾಹೀರಾತುಗಳು ಸೇರಿದಂತೆ ವಿಷಯವನ್ನು ನಾವು ಕಂಡುಕೊಂಡಾಗ, ಅದರ ರಚನೆಯ ಕಾರ್ಯವಿಧಾನವನ್ನು ಲೆಕ್ಕಿಸದೆ ನಾವು ಅದನ್ನು ತೆಗೆದುಹಾಕುತ್ತೇವೆ ಎಂದು ಮೆಟಾ ಹೇಳಿಕೊಂಡಿದೆ. ಆದರೆ ಮೆಟಾ ತನ್ನ ವೇದಿಕೆಗಳಲ್ಲಿ ಇಸ್ಲಾಮೋಫೋಬಿಯಾವನ್ನು ಹರಡುವುದನ್ನು ತಡೆಯಲು ವಿಫಲವಾಗಿದೆ ಎಂದು ಹಿಂದೆ ಆರೋಪ ಕೇಳಿ ಬಂದಿತ್ತು.
ಈ ನಿರ್ಣಾಯಕ ಚುನಾವಣೆಗಳಲ್ಲಿ ಮೆಟಾ ತನ್ನ ವೇದಿಕೆಯಲ್ಲಿ ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಯಲು ಯೋಜನೆಯನ್ನು ರೂಪಿಸಿಕೊಂಡಿಲ್ಲ, AI ರಚಿತ ಚಿತ್ರಗಳನ್ನು ಪತ್ತೆಹಚ್ಚಲು ವಿಫಲವಾದರೆ ಮೆಟಾವನ್ನು ಹೇಗೆ ನಂಬುವುದು ಎಂದು Ekō ಸಂಸ್ಥೆಯ ಹಮ್ಮದ್ ಪ್ರಶ್ನಿಸಿದ್ದಾರೆ.