ಮೂರನೇ ಅವಧಿಯ ಮೋದಿ ಮೊದಲನೇ ಮನ್ ಕಿ ಬಾತ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದ

ಮೂರನೇ ಅವಧಿಯ ಮೋದಿ ಮೊದಲನೇ ಮನ್ ಕಿ ಬಾತ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದ

ನವದೆಹಲಿ : ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು‌. 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದಕ್ಕೆ ಜನರಿಗೆ ಧನ್ಯವಾದಗಳು ತಿಳಿಸಿದರು‌. ಅತಿದೊಡ್ಡ ಚುನಾವಣೆಯನ್ನು ನಡೆಸಿಕೊಟ್ಟ ಚುನಾವಣಾ ಆಯೋಗಕ್ಕೂ ಧನ್ಯಾವಾದ ತಿಳಿಸಿದರು‌.

ಕಾರ್ಯಕ್ರಮದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬಗ್ಗೆಯೂ ಪ್ರಧಾನಿ ಮೋದಿಯವರು ಮಾತನಾಡಿದರು. ಈ ಹೊತ್ತಿಗೆ ಮುಂದಿನ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಅದರಲ್ಲಿ ಭಾರತೀಯ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲು ‘Cheer4India’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಬೇಕೆಂದು ಮನವಿ ಮಾಡಿದರು.

ವಿಶ್ವ ಪರಿಸರ ದಿನದಂದು ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಗಾಗಿ ಒಂದು ಗಿಡ) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನನ್ನ ತಾಯಿಯ ಹೆಸರಲ್ಲಿ ನಾನು ಗಿಡವನ್ನು ನೆಟ್ಟಿದ್ದೇನೆ. ದೇಶದ ಎಲ್ಲರೂ ತಾಯಿಗಾಗಿ ಒಂದು ಗಿಡ ನೆಡುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು. ಕುವೇತ್​ನ ನ್ಯಾಷನಲ್ ರೇಡಿಯೋದಲ್ಲಿ ಪ್ರತೀ ಭಾನುವಾರ ಅರ್ಧಗಂಟೆ ಹಿಂದಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯ ಸ್ಥಳೀಯ ಜನರೂ ಕೂಡ ಈ ಕಾರ್ಯಕ್ರಮ ಇಷ್ಟಪಡುತ್ತಿದ್ದಾರೆ. ಇದಕ್ಕಾಗಿ ಕುವೇತ್ ಸರ್ಕಾರಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಮೋದಿ ಹೇಳಿದರು.

ತುರ್ಕ್​ಮೆನಿಸ್ತಾನ್​ನಲ್ಲಿ ವಿಶ್ವದ 24 ಕವಿಗಳ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ಭಾರತದ ಗುರು ರಬೀಂದ್ರನಾಥ್ ಠಾಗೂರ್ ಅವರ ಪ್ರತಿಮೆ ಇದೆ. ಸುರಿನಾಮ್ ಮತ್ತು ಸೆಂಟ್ ವಿನ್ಸೆಂಟ್​ಮತ್ತು ಗ್ರಿನಾಡೆಸ್​ನಲ್ಲಿ ಭಾರತೀಯ ಪರಂಪರೆಯನ್ನು ಆಚರಿಸಲಾಗುತ್ತದೆ ಎಂದೂ ಮೋದಿ ಪ್ರಸ್ತಾಪಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಅಪ್ಪಿದ ಜಾರ್ಖಂಡ್​ನ ಸಿಧು, ಕಾನ್ಹು ಅವರನ್ನು ಸ್ಮರಿಸಿದರು. ಕೇರಳದಲ್ಲಿ ಬುಡಕಟ್ಟು ಸಮುದಾಯದವರು ತಯಾರಿಸುವ ಛತ್ರಿ, ಆಂಧ್ರದಲ್ಲಿ ಬುಡಕಟ್ಟು ಸಮುದಾಯದವರು ಬೆಳೆಯುವ ಅರಾಕು ಕಾಫಿ ನೆನೆಪಿಸಿಕೊಂಡರು.

ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್​ ಬಗ್ಗೆ ಪ್ರಸ್ತಾಪಿಸಿದ ಮೋದಿ ಉದ್ಯಾನವನದಲ್ಲಿ ಬೆಂಗಳೂರಿಗರು ಒಂದು ಹೊಸ ಸಂಪ್ರದಾಯ ಆರಂಭಿಸಿದ್ದಾರೆ. ಇಲ್ಲಿ ವಾರಕ್ಕೊಮ್ಮೆ, ಪ್ರತಿ ಭಾನುವಾರ ಮಕ್ಕಳು, ಯುವಕರು ಮತ್ತು ಹಿರಿಯರು ಸಂಸ್ಕೃತದಲ್ಲಿ ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲ, ಇಲ್ಲಿ ಅನೇಕ ಚರ್ಚಾ ಕಾರ್ಯಕ್ರಮಗಳನ್ನು ಸಂಸ್ಕೃತದಲ್ಲಿಯೇ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದ ಹೆಸರು – ಸಂಸ್ಕೃತ ವೀಕೆಂಡ್. ನಾವೆಲ್ಲರೂ ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಿದರೆ, ಪ್ರಪಂಚದ ಇಂತಹ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಿಂದ ನಾವು ಬಹಳಷ್ಟು ಕಲಿಯಬಹುದು ಎಂದು ಹೇಳಿದರು‌.

Previous Post
ಇಂದಿನಿಂದ ದೇಶದ್ಯಾಂತ ಹೊಸ ಮೂರು ಅಪರಾಧ ಕಾನೂನುಗಳು ಜಾರಿಗೆ ಬ್ರಿಟಿಷ್ ಕಾಲದ ಹಳೆಯ ಕಾನೂನುಗಳಿಗೆ ಬದಲಾವಣೆ ತಂದಿದ್ದ ಸರ್ಕಾರ
Next Post
ಸಿಎಂ ಬದಲಿಸಿದರೆ ಹೋರಾಟ ಖಚಿತ : ಅಹಿಂದ ಎಚ್ಚರಿಕೆ

Recent News