ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಆಯೋಗ ಕ್ರಮ ಕೈಗೊಳ್ಳಬೇಕು: ಖರ್ಗೆ
ನವದೆಹಲಿ: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
“ನಾವು ಇಲ್ಲಿಯವರೆಗೆ ಬುಲ್ಡೋಜರ್ಗಳನ್ನು ಬಳಸಿಲ್ಲ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಪ್ರಧಾನಿಯೇ ಜನರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದ ನಂತರ ಸಂವಿಧಾನದ ಪ್ರಕಾರ ಎಲ್ಲವನ್ನೂ ರಕ್ಷಿಸಲಾಗುವುದು. ನಾವು ಸಂವಿಧಾನವನ್ನು ಅನುಸರಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಖರ್ಗೆ ಮಾತನಾಡಿದರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್ಪಿ) ಶರದ್ ಪವಾರ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವೇಳೆ ಉಪಸ್ಥಿತರಿದ್ದರು. “ಇಂಡಿಯಾ ಮೈತ್ರಿಕೂಟ ಮಹಾರಾಷ್ಟ್ರದ 48 ಸ್ಥಾನಗಳ ಲೋಕಸಭಾ ಸ್ಥಾನಗಳ ಪೈಕಿ 46ರನ್ನು ಗೆಲ್ಲಲಿದೆ. ಇದನ್ನು ಜನರೇ ಹೇಳುತ್ತಿದ್ದಾರೆ. ನಮ್ಮ ಮೈತ್ರಿಕೂಟ ಗರಿಷ್ಠ ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಸೋಲಿಸಲಿದೆ ಎಂದು ಖರ್ಗೆ ಹೇಳಿದ್ದಾರೆ.
ಮಹಾರಾಷ್ಟ್ರದ ನೈಜ ಪಕ್ಷಗಳಿಂದ ಚಿಹ್ನೆಗಳನ್ನು ಕಿತ್ತುಕೊಂಡು ಬಿಜೆಪಿ ಬೆಂಬಲಿತ ಪಕ್ಷಗಳಿಗೆ ನೀಡಲಾಗಿದೆ ಎಂದು ಶಿವಸೇನೆ ಮತ್ತು ಎನ್ಸಿಪಿಯನ್ನು ಉಲ್ಲೇಖಿಸಿ ಖರ್ಗೆ ವಿಷಾದ ವ್ಯಕ್ತಪಡಿಸಿದರು.
“ಮಹಾರಾಷ್ಟ್ರದ ಅಕ್ರಮ ‘ಮಹಾಯುತಿ’ ಸರ್ಕಾರವನ್ನು ದ್ರೋಹ ಮತ್ತು ಪಿತೂರಿಯ ಆಧಾರದ ಮೇಲೆ ರಚಿಸಲಾಗಿದೆ. ಅದನ್ನು ಸ್ವತಃ ಪ್ರಧಾನಿ ಬೆಂಬಲಿಸುತ್ತಿದ್ದಾರೆ. ಮೋದಿ ಹೋದಲ್ಲೆಲ್ಲಾ ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ನಿಜವಾದ ಪಕ್ಷಗಳಿಂದ ಚಿಹ್ನೆಗಳನ್ನು ಕಸಿದು ಬಿಜೆಪಿ ಬೆಂಬಲಿಸುವ ಪಕ್ಷಗಳಿಗೆ ನೀಡಲಾಗಿದೆ. ಇದು ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ನಿರ್ಧಾರ. ಆದರೆ, ಎಲ್ಲವೂ ಮೋದಿಯವರ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.