ಮೋದಿ ದಯವಿಟ್ಟು ಮಣಿಪುರಕ್ಕೆ ಒಮ್ಮೆ ಬನ್ನಿ: ಸಂಚಲನ ಸೃಷ್ಟಿಸಿದ ಫೈಟರ್ ವಿಡಿಯೋ
ಇಂಫಾಲ, ಮಾ. 12: ಮಣಿಪುರದ ಮಿಕ್ಸ್‌ಡ್ ಮಾರ್ಷಿಯಲ್ ಆರ್ಟ್ (ಎಂಎಂಎ) ಫೈಟರ್ ಚುಂಗ್ರೆಂಗ್ ಕೋರೆನ್ ಅವರ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ. ಮ್ಯಾಟ್ರಿಕ್ಸ್ ಫೈಟ್ ನೈಟ್ (ಎಂಎಫ್‌ಎನ್) ನಲ್ಲಿ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಚುಂಗ್ರೆಂಗ್ ಕೋರೆನ್, ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ಒಮ್ಮೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವುಕರಾಗಿ ಮನವಿ ಮಾಡಿದ್ದಾರೆ.
“ಇದು ನನ್ನ ವಿನಮ್ರ ವಿನಂತಿ. ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಸುಮಾರು ಒಂದು ವರ್ಷ ಕಳೆದಿದೆ. ಜನರು ಸಾಯುತ್ತಿದ್ದಾರೆ ಮತ್ತು ಅನೇಕ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಆಹಾರ ಮತ್ತು ನೀರಿನ ಕೊರತೆಯಿದೆ. ಮಕ್ಕಳಿಗೆ ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಭವಿಷ್ಯವು ಅಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ದಯವಿಟ್ಟು ಮಣಿಪುರಕ್ಕೆ ಒಮ್ಮೆ ಭೇಟಿ ನೀಡಿ ಮತ್ತು ಮಣಿಪುರದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಿ” ಎಂದು ಕೋರೆನ್ ಅವರು ರಿಂಗ್ ನಲ್ಲಿ ಮಾಡಿರುವ ತಮ್ಮ ಗೆಲುವಿನ ಭಾಷಣದಲ್ಲಿ ಹೇಳಿದ್ದಾರೆ.
ಕೋರೆನ್ ಅವರ ಹೇಳಿಕೆಯ ವಿಡಿಯೋವನ್ನು ಅನೇಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಸಂಘರ್ಷ ಪೀಡಿತ ಮಣಿಪುರಕ್ಕೆ ಇದುವರೆಗೆ ಭೇಟಿ ನೀಡದ ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 2023ರಲ್ಲಿ ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಏರ್ಪಟ್ಟಿದೆ. ಒಂದು ವರ್ಷ ಪೂರ್ಣಗೊಂಡರೂ ಇನ್ನೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿಲ್ಲ. ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 219 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಣಿಪುರದಲ್ಲಿ ಇಷ್ಟು ದೊಡ್ಡ ಮಟ್ಟದ ಹಿಂಸಾಚಾರ ನಡೆದರೂ ಪ್ರಧಾನಿ ನರೇಂದ್ರ ಮೋದಿ ಇದುವರೆಗೆ ರಾಜ್ಯಕ್ಕೆ ಭೇಟಿ ಕೊಟ್ಟಿಲ್ಲ.