ಮೋದಿ ಪ್ರಚಾರಕ್ಕೆ ಸಿಂಗಾಪುರ ರೈಲ್ವೆ ನಿಲ್ದಾಣದ ಫೋಟೋ ಬಳಸಿದ ಬಿಜೆಪಿ
ನವದೆಹಲಿ, ಮೇ 18: ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರು ಚಿತ್ರವಿರುವ ಈ ಪೋಸ್ಟರ್ ಜೊತೆಗೆ “ಉದ್ಯೋಗ ಸೃಷ್ಟಿಯಾಗುತ್ತಿಲ್ಲವಾದರೆ, ಮೆಟ್ರೋ ಸೇವೆಗಳು ಭಾರತದ ವಿವಿಧ ನಗರಗಳನ್ನು ತಲುಪಿದ್ದು ಹೇಗೆ? 2014 ರಲ್ಲಿ 5 ನಗರಗಳಲ್ಲಿ ಇದ್ದ ಮೆಟ್ರೋ ಸೇವೆಗಳು ಈಗ 20 ನಗರಗಳಿಗೆ ವಿಸ್ತರಿಸಿವೆ” ಎಂದು ಬರೆದುಕೊಳ್ಳಲಾಗಿತ್ತು.
ಈ ಪೋಸ್ಟರ್ ಕುರಿತು ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ನಡೆಸಿದ್ದು, ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿಯವರ ಹಿಂಭಾಗದಲ್ಲಿರುವ ಮೆಟ್ರೋದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದೆ. ಈ ವೇಳೆ ಆ ಫೋಟೋ ಶಾನ್ ಎಂಬ ಛಾಯಾಗ್ರಾಹಕ ‘ಅನ್‌ಸ್ಪ್ಲಾಶ್’ ಫೋಟೋ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರಕ್ಕೆ ಹೋಲಿಕೆ ಕಂಡು ಬಂದಿದೆ.
ಆಲ್ಟ್ ನ್ಯೂಸ್ ತಂಡ ಇನ್‌ಸ್ಟಾಗ್ರಾಮ್ ಮುಖಾಂತರ ಶಾನ್ ಅವರನ್ನು ಸಂಪರ್ಕಿಸಿದ್ದು, ಈ ಫೋಟೋ ಸಿಂಗಾಪುರದ ಜುರಾಂಗ್ ಈಸ್ಟ್ ನಿಲ್ದಾಣದ್ದು, ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ ಎಂದಿದೆ. ಹಾಗಾಗಿ, ಬಿಜೆಪಿಯ ಪೋಸ್ಟರ್‌ನಲ್ಲಿ ಬಳಸಲಾದ ಮೆಟ್ರೋ ರೈಲಿನ ಚಿತ್ರ ಸಿಂಗಾಪುರದ ರೈಲ್ವೆ ನಿಲ್ದಾಣದ್ದೇ ಹೊರತು, ಭಾರತದಲ್ಲ ಎಂಬುವುದನ್ನು ಇದು ಖಚಿತಪಡಿಸುತ್ತದೆ. ಶಾನ್ ಅವರು ಸೆರೆ ಹಿಡಿದ ಸಿಂಗಾಪುರದ ಮೆಟ್ರೋ ನಿಲ್ದಾಣದ ಫೋಟೋವನ್ನು ಕ್ರಾಪ್ ಮಾಡಿ ಬಿಜೆಪಿ ತನ್ನ ಪೋಸ್ಟರ್‌ಗೆ ಬಳಸಿಕೊಂಡಿದೆ ಎಂಬುವುದನ್ನು ಆಲ್ಟ್ ನ್ಯೂಸ್ ಸ್ಪಷ್ಟವಾಗಿ ಹೋಲಿಕೆ ಮಾಡಿ ತೋರಿಸಿದೆ.