ಮೋದಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ಸರಕಾರಿ ಉದ್ಯೋಗಿಗಳಿಗೆ ಸೂಚನೆ

ಮೋದಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ಸರಕಾರಿ ಉದ್ಯೋಗಿಗಳಿಗೆ ಸೂಚನೆ

ಶ್ರೀನಗರ, ಮಾ. 5: ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಸುಮಾರು 7,000 ಉದ್ಯೋಗಿಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಶ್ರೀನಗರದಲ್ಲಿ ಕಳೆದ 9 ವರ್ಷಗಳಲ್ಲಿ ಮೋದಿ ಇದೇ ಮೊದಲ ಬಾರಿಗೆ ರ್‍ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಕಾಶ್ಮೀರದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕೇಸರಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
370ನೇ ವಿಧಿ ರದ್ದುಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಶ್ಮೀರದಲ್ಲಿ ವ್ಯಾಪಕ ಬೆಂಬಲವನ್ನು ನೀಡುವ ಪ್ರಯತ್ನವಾಗಿ ಜಮ್ಮು-ಕಾಶ್ಮೀರ ಆಡಳಿತವು ಶಿಕ್ಷಣ, ಕ್ರೀಡೆ, ಕೃಷಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಇತರ 13 ಇಲಾಖೆಗಳ ನೌಕರರಿಗೆ ಮೋದಿಯ ರ್ಯಾಲಿಯಲ್ಲಿ ಭಾಗವಹಿಸುವಂತೆ ಆದೇಶ ನೀಡಿದೆ. ಶ್ರೀನಗರದ ಖಾಸಗಿ ಶಾಲೆಗಳಿಗೆ ಈ ನೌಕರರನ್ನು ಶಾಲಾ ಬಸ್‌ಗಳಲ್ಲಿ ಬಕ್ಷಿ ಕ್ರೀಡಾಂಗಣಕ್ಕೆ ಕರೆದೊಯ್ಯುವಂತೆ ಆದೇಶಿಸಿದೆ ಎಂದು ವರದಿಯಾಗಿದೆ, ಇದಲ್ಲದೆ ಶ್ರೀನಗರದ ಆಹಾರ ಸುರಕ್ಷತಾ ಇಲಾಖೆಗೆ ಕೂಡ ಇದೇ ರೀತಿಯ ಆದೇಶವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಭದ್ರತಾ ಏಜೆನ್ಸಿಗಳಿಗೆ, ಮೋದಿ ಅವರ ರ್ಯಾಲಿಯಲ್ಲಿ ಭಾಗವಹಿಸಲು ಸೂಚಿಸಲಾದ ನೌಕರರು ಪ್ರತ್ಯೇಕತಾವಾದಿ ಗುಂಪುಗಳು ಅಥವಾ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆಯೇ ಎಂದು ಕಂಡುಹಿಡಿಯಲು ಆದೇಶಿಸಲಾಗಿದೆ. ಸ್ಥಳೀಯ ಸುದ್ದಿ ಮಾದ್ಯಮದ ವರದಿಯ ಪ್ರಕಾರ, ಶ್ರೀನಗರದ 100ಕ್ಕೂ ಹೆಚ್ಚು ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ಅತಿಥಿ ಗೃಹಗಳನ್ನು ಮೋದಿ ಕಾರ್ಯಕ್ರಮದ ಹಿನ್ನೆಲೆ ಮುಂಗಡವಾಗಿ ಕಾಯ್ದಿರಿಸಲಾಗಿದೆ. 1000ಕ್ಕೂ ಹೆಚ್ಚು ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ.
ಮೋದಿಯವರ ಭೇಟಿಗೆ ಮುಂಚಿತವಾಗಿ, ಕೇಂದ್ರ ಗೃಹ ಸಚಿವಾಲಯವು ಎಕ್ಸ್‌ನಲ್ಲಿ ಸ್ವಯಂ-ಅಭಿನಂದನೆಯ ಪೋಸ್ಟ್‌ಗಳನ್ನು ಹಾಕಿಕೊಂಡಿದೆ. ಆರ್ಟಿಕಲ್ 370 ರದ್ದತಿ “ಶಾಂತಿಯುತ ಮತ್ತು ಸಮೃದ್ಧ” ಜಮ್ಮು ಮತ್ತು ಕಾಶ್ಮೀರವನ್ನು ರಚಿಸಲು ಸಹಾಯ ಮಾಡಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಕಲ್ಲು ತೂರಾಟದ ಘಟನೆಗಳಲ್ಲಿ 100 ಪ್ರತಿಶತದಷ್ಟು ಇಳಿಕೆಯಾಗಿದೆ. 2023ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯೂ ವರದಿಯಾಗಿಲ್ಲ. ನಾಗರಿಕರ ಸಾವುಗಳು ಶೇಕಡಾ 81ರಷ್ಟು ಕಡಿಮೆಯಾಗಿದೆ. 69ರಷ್ಟು ಭಯೋತ್ಪಾದಕ ಘಟನೆಗಳು ಕಡಿಮೆಯಾಗಿದೆ. ಭದ್ರತಾ ಸಿಬ್ಬಂದಿಯ ಹತ್ಯೆಗಳು ಶೇಕಡಾ 47ರಷ್ಟು ಕಡಿಮೆಯಾಗಿದೆ ಎಂದು ಗೃಹ ಸಚಿವಾಲಯದ ವರದಿ ತಿಳಿಸಿದೆ.
ಶ್ರೀನಗರದಲ್ಲಿ ಬಿಜೆಪಿಯ ಜಮ್ಮು-ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ನಂತರ ಕಾಶ್ಮೀರದಲ್ಲಿ ಪ್ರಧಾನಿಯವರ ಮೊದಲ ರ್ಯಾಲಿಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಬಕ್ಷಿ ಕ್ರೀಡಾಂಗಣವು ಕೇವಲ 18,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ ಮತ್ತು ಮೈದಾನದಲ್ಲಿ ಸುಮಾರು 10,000 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಂಗಣವು ಸುಮಾರು 30,000 ಜನರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಅದರೆ ಜಮ್ಮು-ಕಾಶ್ಮೀರ ಬಿಜೆಪಿ ಮುಖ್ಯಸ್ಥರ ಹೇಳಿಕೆ ಅನುಮಾನಗಳನ್ನು ಹುಟ್ಟುಹಾಕಿದೆ.
ಮೋದಿ ಶ್ರೀನಗರ ಭೇಟಿ ವೇಳೆ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ. ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಮೋದಿ ಭೇಟಿ ಹಿನ್ನೆಲೆ ಶ್ರೀನಗರ ನಗರದಾದ್ಯಂತ ಬಿಜೆಪಿ 10,000 ಧ್ವಜಗಳನ್ನು ಹಾಕಿದೆ ಎಂದು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಹೇಳಿದ್ದಾರೆ. ಮೋದಿ ರ್‍ಯಾಲಿ ಹಿನ್ನೆಲೆ ಶ್ರೀನಗರದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳಿಂದ ಭದ್ರತೆ ಕಲ್ಪಿಸಲಾಗಿದೆ.

Previous Post
ಮೋದಿ ಕಾಲ-ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸ್ಥಿರತೆಗಳ ಅನ್ಯಾಯ ಕಾಲ: ಕಾಂಗ್ರೆಸ್
Next Post
ನಾಸಾಗೆ ಹೋಗಲು ಸಜ್ಜಾದ ಯುವ ವಿಜ್ಞಾನಿಗಳ ತಂಡ

Recent News