ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಶಂಕಿತ ಐಸಿಸ್ ಉಗ್ರನನ್ನು ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ದೆಹಲಿಯಲ್ಲಿ ಬಂಧಿಸಿದೆ. ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ಸೇರಿ ಮತ್ತಿಬ್ಬರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶಹನವಾಜ್ ಪುಣೆ ಮಾಡ್ಯೂಲ್ ಪ್ರಕರಣದ ಆರೋಪಿಯಾಗಿದ್ದ. ಈತ ಮೂಲತಃ ದೆಹಲಿಯವನು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಈತನನ್ನು ಪುಣೆಯಲ್ಲಿ ಬಂದಿಸಲಾಗಿತ್ತು. ಆದರೆ ಈತ ಪೊಲೀಸರಿಂದ ತಪ್ಪಿಸಿಕೊಂಡು ದೆಹಲಿಯ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್ನ ಸುಳಿವು ಸಿಕ್ಕಿದ ಬಳಿಕ ಈ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಶಂಕಿತರು ವಿದೇಶಿ ಮೂಲದ ಹ್ಯಾಂಡ್ಲರ್ಗಳ ಸೂಚನೆಗಳ ಆಧಾರದ ಮೇಲೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಾಡ್ಯೂಲ್ ಯೋಜಿಸಿದ್ದರು.
ಈ ಹಿಂದೆ ಶಹನವಾಜ್ ಮತ್ತು ಇತರ ಮೂವರು ಶಂಕಿತ ಉಗ್ರರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ವಾಲ ಮತ್ತು ತಲ್ಹಾ ಲಿಯಾಕತ್ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಎನ್ಐಎ ಘೋಷಿಸಿತ್ತು.
ಈ ನಾಲ್ವರೂ ಮಹಾರಾಷ್ಟ್ರದ ಪುಣೆಯಲ್ಲಿರುವ ಭಯೋತ್ಪಾದಕ ಸಂಘಟನೆ ಐಸಿಸ್ನ ಮಾಡ್ಯೂಲ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪುಣೆಯಲ್ಲಿ ಐಸಿಸ್ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದ ಮೇಲೆ ಎನ್ಐಎ ಕಳೆದ ತಿಂಗಳು ಹಲವರನ್ನು ಬಂಧಿಸಿತ್ತು. ಐಸಿಸ್ನ ಪುಣೆ ಘಟಕವು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಯೋಜನೆಗಳನ್ನು ಹೊಂದಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.