ಯುಪಿಎಸ್‌ಸಿ ವಿದ್ಯಾರ್ಥಿಗಳ ಸಾವು; ಲೋಕಸಭೆಯಲ್ಲಿ ಚರ್ಚೆ

ಯುಪಿಎಸ್‌ಸಿ ವಿದ್ಯಾರ್ಥಿಗಳ ಸಾವು; ಲೋಕಸಭೆಯಲ್ಲಿ ಚರ್ಚೆ

ನವದೆಹಲಿ : ದೆಹಲಿಯ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ನೆಲ ಮಾಳಿಗೆಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣವನ್ನು ಇಂದು ಲೋಕಸಭೆಯಲ್ಲಿ ಚರ್ಚಿಸಲಾಯಿತು. ಸಂಸದರಾದ ಶಶಿ ತರೂರ್, ಅಖಿಲೇಶ್ ಯಾದವ್, ಬನ್ಸೂರಿ ಸ್ವರಾಜ್ ಸೇರಿ ಹಲವು ಸಂಸದರು ಈ ಬಗ್ಗೆ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದರು.

ಶಶಿ ತರೂರು ಮಾತನಾಡಿ, ಯುಪಿಎಸ್‌ಸಿ ಮೂಲಕ ದೇಶ ಸೇವೆ ಕನಸು ಕಂಡು ವಿದ್ಯಾರ್ಥಿಯನ್ನು ಕಳೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ, ಯುವಕನ ಸಾವಿಗೆ ಏನೇ ನೀಡಿದರೂ ನಷ್ಟ ಭರಿಸಲು ಸಾಧ್ಯವಿಲ್ಲ‌. ಇದು ನಿಯಮಗಳ ಉಲ್ಲಂಘನೆಯಾಗಿದೆ ಅಗ್ನಿ ಸುರಕ್ಷತೆ, ಪ್ರವಾಹ ಸುರಕ್ಷತೆ ವಿಚಾರದಲ್ಲಿ ನಿಯಮಗಳ ಉಲ್ಲಂಘನೆ ಹೆಚ್ಚಿದೆ ಅಧಿಕಾರಿಗಳು ಅನುಮತಿ ನೀಡುವ ಮುನ್ನ ಈ ಬಗ್ಗೆ ಪರಿಶೀಲನೆ ಮಾಡುವುದಿಲ್ಲ ಎಂದು ಆರೋಪಿಸಿದರು.

ಅಖೀಲೇಶ್ ಯಾದವ್ ಮಾತನಾಡಿ, ಇದೊಂದು ನೋವಿನ ಘಟನೆ, ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡುವುದು ಮತ್ತು ಎನ್‌ಒಸಿ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಈ ಘಟನಗೆ ಎಲ್ಲರೂ ಹೊಣೆಗಾರರು ಅವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಇದು ಕೇವಲ ಒಂದು ಅಕ್ರಮ ಕಟ್ಟಡದ ಪ್ರಕರಣವಲ್ಲ, ನಾವು ಇದನ್ನು ಯುಪಿಯಲ್ಲಿ ನೋಡುತ್ತಿದ್ದೇವೆ ಎಂದರು.

ದೆಹಲಿ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಬನ್ಸೂರಿ ಸ್ವರಾಜ್ ಆರೋಪಿಸಿದರು. ಮೂವರು ವಿದ್ಯಾರ್ಥಿಗಳ ಸಾವಿಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಆಡಳಿತದ ಸಂಪೂರ್ಣ ನಿರಾಸಕ್ತಿಯೇ ಕಾರಣ, ಒಂದು ದಶಕದಿಂದ ದೆಹಲಿಯಲ್ಲಿ ಎಎಪಿ ಅಧಿಕಾರ ನಡೆಸುತ್ತಿದೆ, ಆದರೆ ಅದು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ದೆಹಲಿ ಜಲ್ ಬೋರ್ಡ್ ವಿರುದ್ಧ ಸ್ಥಳೀಯ ಶಾಸಕರು, ಕೌನ್ಸಿಲರ್‌ಗಳು ಅಧಿಕಾರಿಗಳಿಗೆ ನಿರಂತರವಾಗಿ ದೂರು ನೀಡುತ್ತಿದ್ದರು ಪರಿಗಣಿಸಿಲ್ಲ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವಂತೆ ನಾನು ಗೃಹ ಸಚಿವಾಲಯವನ್ನು ಕೋರುತ್ತೇನೆ ಎಂದು ಬನ್ಸೂರಿ ಹೇಳಿದರು‌.

ಈ‌ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ ಘಟನೆಗೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ ಎಂದು ಡಿಸಿಪಿ ಎಂ ಹರ್ಷವರ್ಧನ್ ಹೇಳಿದ್ದಾರೆ. ಮೃತ ವಿದ್ಯಾರ್ಥಿಗಳ ಸಾವಿಗೆ ನ್ಯಾಯ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.

Previous Post
ಬಂಡವಾಳ ಹಿಂತೆಗೆತ ಎಂಬ ನಿರ್ಧಾರವನ್ನು ಹಿಂಪಡೆದು ಮರು ಹೂಡಿಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ಮಧ್ಯಮ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ 
Next Post
ಜಿಲ್ಲಾ ನ್ಯಾಯಾಧೀಶರು ಸಮಿತಿಯ ಭಾಗವಾಗಿರಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಮೇಲ್ವಿಚಾರಣಾ ಸಮಿತಿ ರಚನೆಗೆ ನಿರ್ದೇಶನ

Recent News