ರಫಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 40 ಸಾವು

ರಫಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 40 ಸಾವು

ಗಝಾ, ಮೇ 27: ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ‘ಅಲ್‌ ಜಝೀರಾ’ ವರದಿ ಮಾಡಿದೆ.
ಪ್ಯಾಲೆಸ್ತೀನ್ ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ತಾಲ್ ಅಸ್-ಸುಲ್ತಾನ್, ಜಬಾಲಿಯಾ, ನುಸೆರಾತ್ ಮತ್ತು ಗಾಜಾ ನಗರ ಸೇರಿದಂತೆ ಹಲವೆಡೆ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರ ಆಶ್ರಯಗಳ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲಿ ಸೇನೆಯು ದಾಳಿಯನ್ನು ದೃಢಪಡಿಸಿದ್ದು, ಹಮಾಸ್ ಅನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಈ ವೇಳೆ ಬೆಂಕಿಯಿಂದ ನಾಗರಿಕರು ಗಾಯಗೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದೆ. ಅಕ್ಟೋಬರ್ 7,2023ರಿಂದ ಗಾಝಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣದಲ್ಲಿ ಇದುವರೆಗೆ ಸುಮಾರು 35,984 ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ ಮತ್ತು 80,643 ಜನರು ಗಾಯಗೊಂಡಿದ್ದಾರೆ.

ಗಾಝಾದ ಇತರ ಭಾಗಗಳಲ್ಲಿ ಇಸ್ರೇಲ್ ನಿರಂತರ ದಾಳಿ ನಡೆಸಿ ನರಕ ಮಾಡಿದೆ. ಜೀವ ಉಳಿಸಿಕೊಂಡ ಲಕ್ಷಾಂತರ ಜನರು ರಫಾದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಇಸ್ರೇಲ್ ಈ ಪ್ರದೇಶವನ್ನೂ ಗುರಿಯಾಗಿಸಿದ್ದು, ಹಮಾಸ್ ಮೇಲೆ ದಾಳಿ ಮಾಡುವ ನೆಪದಲ್ಲಿ ಅಮಾಯಕ ನಾಗರಿಕರನ್ನು ಕೊಲ್ಲುತ್ತಿದೆ.

ಇಸ್ರೇಲ್‌ನ ನಿರಂತರ ದಾಳಿ ಮತ್ತು ಮಾನವೀಯ ನೆರವಿಗೆ ಅಡ್ಡಿ ಮಾಡಿದ ಕಾರಣ, ಜನರು ಆಹಾರ, ನೀರು ಹುಡುಕಲು ತಿಂಗಳುಗಳ ಕಾಲ ಪರದಾಡಿದರು. ಈಗ ರಫಾದಲ್ಲಿ ಟೆಂಟ್ ನಿರ್ಮಿಸಿ ಕೊಂಚ ನಿಟ್ಟುಸಿರುವ ಬಿಡುವ ಹೊತ್ತಿಗೆ ಇಸ್ರೇಲ್ ಅತ್ಯಂತ ಸುಡುವ ವಸ್ತುಗಳಿಂದ ರಫಾದ ಮೇಲೆ ದಾಳಿ ನಡೆಸಿದೆ ಎಂದು ಪ್ಯಾಲೆಸ್ತೀನಿಯನ್ ರಾಜಕೀಯ ವಿಶ್ಲೇಷಕ ಮತ್ತು ನಿರೂಪಕ ನೂರ್ ಒಡೆಹ್ ಅಲ್ ಜಝೀರಾಗೆ ಹೇಳಿದ್ದಾರೆ.

ಗಾಝಾದ ಜನತೆಗೆ ಜೀವ ಉಳಿಸಿಕೊಳ್ಳಲು ಇನ್ನು ಯಾವುದೇ ಜಾಗವಿಲ್ಲ, ಯಾವುದೇ ಆಸ್ಪತ್ರೆ ಸೌಲಭ್ಯಗಳಿಲ್ಲ ಎಂದು ಇಸ್ರೇಲ್‌ಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯುಎಸ್ ಏನು ಹೇಳುತ್ತದೆ ಎಂದು ನೋಡಬೇಕು ಎಂದಿರುವ ಒಡೆಹ್, ಶಸ್ತ್ರಾಸ್ತ್ರ ಮತ್ತು ಆರ್ಥಿಕ ನಿರ್ಬಂಧ ಸೇರಿದಂತೆ ಹಣಕಾಸಿನ ಪರಿಣಾಮಗಳು ಮಾತ್ರ ಇಸ್ರೇಲಿ ದಾಳಿಯನ್ನು ಕೊನೆಗೊಳಿಸುವ ಏಕೈಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

Previous Post
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 283 ಕೋಟಿ ರೂ ಬಾಕಿ ಉಳಿಸಿಕೊಂಡ ಗ್ಯಾರಂಟಿ ಸರ್ಕಾರ
Next Post
ಗುಟ್ಕಾ, ಪಾನ್ ಮಸಾಲಾ ನಿಷೇಧಿಸಿದ ತೆಲಂಗಾಣ ಸರ್ಕಾರ

Recent News