ರಷ್ಯಾ ಸೇನೆಯಲ್ಲಿರುವ ಭಾರತೀಯರ‌ ಬಿಡುಗಡೆಗೆ ಸಮ್ಮತಿ

ರಷ್ಯಾ ಸೇನೆಯಲ್ಲಿರುವ ಭಾರತೀಯರ‌ ಬಿಡುಗಡೆಗೆ ಸಮ್ಮತಿ

ಮಾಸ್ಕೋ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಮ್ಮ ದೇಶದ ಸೇನೆಯಲ್ಲಿ ಕೆಲಸ ಮಾಡುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡುವಂತೆ ಚರ್ಚಿಸಿದ್ದಾರೆ. ಚರ್ಚೆಯ ಬಳಿಕ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ರಷ್ಯಾ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಪ್ರವಾಸಕ್ಕಾಗಿ ರಷ್ಯಾಕ್ಕೆ ತೆರಳಿರುವ ಮೋದಿ, ಸೋಮವಾರ ಸಂಜೆ ಪುಟಿನ್ ಆಯೋಜಿಸಿದ್ದ ಔತಣಕೂಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ಅವರನ್ನು ಭಾರತಕ್ಕೆ ಕಳಿಸಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಹೇಳಿದ್ದಾರೆ. ಮೋದಿಯವರ ಈ ಬೇಡಿಕೆಗೆ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಔತಣಕೂಟದಲ್ಲಿ, ಪುಟಿನ್ ಅವರು 3 ಬಾರಿಗೆ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಮೋದಿಯವರನ್ನು ಅಭಿನಂದಿಸಿದರು. ಭಾರತದ ಆರ್ಥಿಕತೆಯ ಏರುತ್ತಿರುವ ಸ್ಥಾನಮಾನದ ಬಗ್ಗೆ ಚರ್ಚಿಸಿದ್ದಾರೆ. ಸುಮಾರು 24ಕ್ಕೂ ಹೆಚ್ಚು ಭಾರತೀಯರು ಹೆಚ್ಚಿನ ಸಂಬಳದ ಉದ್ಯೋಗದ ಆಸೆಗೆ ಏಜೆಂಟ್‍ಗಳಿಂದ ಮೋಸ ಹೋಗಿದ್ದಾರೆ. ಬಳಿಕ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ.

ಈ ಪ್ರಕರಣದ ವಿಚಾರವಾಗಿ, ಭಾರತೀಯ ತನಿಖಾ ಸಂಸ್ಥೆಗಳು ಕೂಡ ದಾಳಿ ನಡೆಸಿ ಭಾರತೀಯರನ್ನು ರಷ್ಯಾಕ್ಕೆ ಸಾಗಿಸುವ ಜಾಲವನ್ನು ಭೇದಿಸಿವೆ. ದಾಳಿಯ ಸಮಯದಲ್ಲಿ, ಈ ಸಂಸ್ಥೆಗಳು ಕನಿಷ್ಠ 35 ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿವೆ ಎಂದು ತಿಳಿದುಬಂದಿದೆ. ಆದರೂ ಅವರೆಲ್ಲರೂ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧದಲ್ಲಿ ಕನಿಷ್ಠ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ. ಅಲ್ಲದೇ ಯುದ್ಧ ವಲಯದಲ್ಲಿ ಸಿಲುಕಿರುವ ಭಾರತೀಯರು ನಮ್ಮನ್ನು ವಂಚಿಸಿ ಇಲ್ಲಿಗೆ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Previous Post
ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಚಿವ ಹೆಚ್.ಡಿ.ಕುಮಾರಸ್ವಾಮಿ
Next Post
ಹತ್ರಾಸ್‌ ಕಾಲ್ತುಳಿತ ಪ್ರಕರಣ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

Recent News