ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.
ಬೆಂಗಳೂರು, ಫೆ.20-ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯುವ ಯಾವುದೇ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸುವ ಕುರಿತ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ಕೇಂದ್ರದ ನೆರವು ಕೋರಿ ಇದುವರೆಗೆ 17 ಪತ್ರಗಳನ್ನು ಬರೆಯಲಾಗಿದೆ. ಒಂದು ಪತ್ರಕ್ಕೆ ಮಾತ್ರ ಅಮಿತ್ ಷಾ ಪ್ರತಿಕ್ರಿಯಿಸಿದ್ದಾರೆ ಎಂದರು.
ಮನ್ರೇಗಾ ಯೋಜನೆಯಡಿ ದುಡಿಯುವ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂಬ ಉದ್ದೇಶದಿಂದ ಕೇಳಲಾಗಿತ್ತು ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿನ ಹೇಳಿರುವ ಅಂಶಗಳನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಸುಳ್ಳುಗಳಿದ್ದರೆ ಬೊಟ್ಟು ಮಾಡಿ ಪ್ರತಿ ಪಕ್ಷಗಳು ತೋರಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಮರ್ಪಕವಾಗಿ ಕಾಪಾಡಿಕೊಂಡು ಬರಲಾಗುತ್ತಿದೆ. ಇದರ ಫಲವಾಗಿ ಇದುವರೆಗೆ 77 ಸಾವಿರ ಕೋಟಿ ರೂ. ಬಂಡವಾಳ ಹರಿದು ಬಂದಿದೆ ಎಂದರು.