ರಾಜ್ಯದ ನಾಲ್ವರು ಸಚಿವರಿಗೆ ಪವರ್ ಫುಲ್ ಖಾತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ನಾಲ್ವರು ಸೇರಿದಂತೆ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅದರ ಪಟ್ಟಿ ಈ ಕೆಳಗಿನಂತಿದೆ.
ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ. ವಿ. ಸೋಮಣ್ಣ ಅವರಿಗೆ ಜಲಶಕ್ತಿ ರಾಜ್ಯಖಾತೆ, ರೈಲ್ವೇ ಸಚಿವ ರಾಜ್ಯಖಾತೆಯನ್ನು ಹಂಚಿಕೆ ಮಾಡಿದೆ. ಪ್ರಹ್ಲಾದ್ ಜೋಶಿ ಅವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ನೀಡಲಾಗಿದೆ.
ಜೂನ್ 9 ರಂದು ನರೇಂದ್ರ ಮೋದಿ ಸಂಪುಟದ ನೂತನ ಸಚಿವರಾಗಿ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದರು. ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು 2ನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ.
ಖಾತೆ ಹಂಚಿಕೆ ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಚಿವ ಸಂಪುಟ ಸಭೆಯಲ್ಲಿ ವಿಶ್ವಾಸ ಇಟ್ಟು ಖಾತೆ ಹಂಚಿಕೆ ಮಾಡಿದ್ದಾರೆ, ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ ಕನ್ನಡಿಗರ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇನೆ, ರಾಜ್ಯದ ಇತರೆ ಸಚಿವರಿಗೂ ಪ್ರಮುಖ ಖಾತೆ ನೀಡಿದ್ದಾರೆ ಎಂದರು.
ಪ್ರಹ್ಲಾದ್ ಜೋಷಿಯವರಿಗೆ ಆಹಾರ ಖಾತೆ ಕೊಟ್ಟಿದ್ದಾರೆ, ದೊಡ್ಡ, ಪ್ರಮುಖವಾದ ಇಲಾಖೆ ನೀಡಿದ್ದಾರೆ, ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ, ನನ್ನ ಮೇಲೆ ಸವಾಲಿದೆ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕೆಲಸ ಮಾಡುತ್ತೇನೆ. ಕರ್ನಾಟಕಕ್ಕೆ ಅಂತ ಮಾತ್ರವಲ್ಲ ದೇಶಾದ್ಯಾಂತ ಸುತ್ತಾಡಿ ಬದಲಾವಣೆ ತರಬೇಕು ಎಂದು ಬಯಸಿದ್ದೇನೆ
ನನ್ನ ಜೀವನದಲ್ಲಿ ಇದು ಅತಿ ದೊಡ್ಡ ಸವಾಲು, ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ಇವೆ, ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ ಕೊಟ್ಟಿದ್ದಾರೆ ಪ್ರಮಾಣಿಕವಾಗಿ ಕ್ಷಣ ವ್ಯರ್ಥಮಾಡದೆ ಕೆಲಸ ಮಾಡುತ್ತೇನೆ ರೂಟ್ ಮ್ಯಾಪ್ ಸಿದ್ದಮಾಡಿ ಕೆಲಸ ಮಾಡಿತ್ತೇನೆ ನನ್ನದೆ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಮಾಣಿಕೆ ಪ್ರಯತ್ನ ಮಾಡುತ್ತೇನೆ.
ಶೋಭಾ ಅವರಿಗೂ ಉತ್ತಮ ಖಾತೆ ಸಿಕ್ಕಿದೆ ದೇಶದ ಪ್ರಗತಿಗೆ ನಾವು ಕೆಲಸ ಮಾಡುತ್ತೇವೆ ಹೊಸ ಇತಿಹಾಸ ಕರ್ನಾಟಕದಲ್ಲಿ ತರುವುದು ಮಾತ್ರವಲ್ಲ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇವೆ ಕೃಷಿ ಖಾತೆ ನಿರೀಕ್ಷೆ ಇತ್ತು, ಆದರೆ ಮೋದಿ ತೀರ್ಮಾನ ಮಾಡಿದ್ದಾರೆ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ ಎಲ್ಲದರ ಬಗ್ಗೆ ಕೆಲಸ ಮಾಡಬೇಕಿದೆ ಎಂದರು. ಇಂದು ಸಂಜೆ ಐದು ಗಂಟೆಗೆ ಅಧಿಕಾರ ಸ್ವೀಕರಿಸುವುದಾಗಿ ಹೇಳಿದರು.
ವಿ.ಸೋಮಣ್ಣ ಪ್ರತಿಕ್ರಿಯಿಸಿ ಹೊಸ ಜವಾಬ್ದಾರಿ ನೀಡಿದಕ್ಕೆ ನರೇಂದ್ರ ಮೋದಿ ಅವರಿಗೆ ಅಭಾರಿಯಾಗಿದ್ದೇನೆ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವನ್ನಾಗಿ ಮಾಡಿದ್ದಾರೆ ಕರ್ನಾಟಕವೂ ಎಲ್ಲ ರಾಜ್ಯಗಳಲ್ಲಿ ತನ್ನದೇಯಾದ ಸಮಸ್ಯೆ ಇದೆ ಎಲ್ಲವೂ ಅಧ್ಯಯನ ಮಾಡುತ್ತೆನೆ ಒಳ್ಳೆ ಕೆಲಸ ಮಾಡಲು ಅವಕಾಶ ಇದೆ ನಾಳೆ ಅಧಿಕಾರ ಸ್ವೀಕಾರ ಮಾಡಲಿದ್ದೇನೆ ಎಂದರು.