ರಾಜ್ಯಸಭೆ ಚುನಾವಣೆ: ಕುಪೇಂದ್ರರೆಡ್ಡಿ 5ನೇ ಅಭ್ಯರ್ಥಿ, ರಂಗೇರಿದ ಅಖಾಡ

ರಾಜ್ಯಸಭೆ ಚುನಾವಣೆ: ಕುಪೇಂದ್ರರೆಡ್ಡಿ 5ನೇ ಅಭ್ಯರ್ಥಿ, ರಂಗೇರಿದ ಅಖಾಡ

ಬೆಂಗಳೂರು, ಫೆ. 15- ರಾಜ್ಯಸಭೆಯ 4 ಸ್ಥಾನಗಳಿಗೆ ಈ ತಿಂಗಳ 27 ರಂದು ನಡೆಯಲಿರುವ ಚುನಾವಣೆಗೆ ಅಖಾಡ ರಂಗೇರಿದ್ದು, 5ನೇ ಅಭ್ಯರ್ಥಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕುಪೇಂದ್ರರೆಡ್ಡಿ ಇಂದು ನಾಮಪತ್ರ ಸಲ್ಲಿಸಿದರು.ವಿಧಾನಸಭೆಯಲ್ಲಿ ಈಗಿರುವ ಪಕ್ಷಗಳ ಬಲಾಬಲದ ಪ್ರಕಾರ ಕಾಂಗ್ರೆಸ್‌ಗೆ 3, ಬಿಜೆಪಿ 1 ಸ್ಥಾನಗಳಲ್ಲಿ ಸುಲಭವಾಗಿ ಗೆಲ್ಲಬಹುದಾಗಿದೆ. ಈಗ 5ನೇ ಅಭ್ಯರ್ಥಿ ಕಣಕ್ಕಿಳಿದಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದಂತಾಗಿದೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 5ನೇ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿಯವರನ್ನು ರಾಜ್ಯಸಭಾ ಕಣಕ್ಕೆ ಇಳಿಸಿರುವುದು ಕಾಂಗ್ರೆಸ್‌ನಲ್ಲಿ ತಲ್ಲಣ ಮೂಡಿಸಿದ್ದು, ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಕಾಂಗ್ರೆಸ್‌ಗೆ ಎದುರಾಗಿದೆ.
ಈ ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಅಭ್ಯರ್ಥಿಗೆ 45 ಶಾಸಕರ ಮತ ಅಗತ್ಯವಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕರಿದ್ದು, ಬಿಜೆಪಿಯ 66, ಜೆಡಿಎಸ್‌ನ 19 ಶಾಸಕರಿದ್ದಾರೆ. ಇವರ ಜತೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ಧನರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರರಾದ ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್, ಗೌರಿಬಿದನೂರಿನ ಕೆ.ಪಿ. ಪುಟ್ಟಸ್ವಾಮಿ ಇದ್ದು, ಈ ಪೈಕಿ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಯವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಜನಾರ್ಧನರೆಡ್ಡಿ ಆರಂಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದರಾದರೂ ಈಗ ಅವರು ಬಿಜೆಪಿ ಕಡೆ ವಾಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಮೂವರು ಅಭ್ಯರ್ಥಿಗಳಿಗೆ ತಲಾ 45 ಮತಗಳನ್ನು ಹಂಚಿಕೆ ಮಾಡಲಿದೆ. ಜತೆಗೆ ಮೂವರು ಪಕ್ಷೇತರರ ಮತಗಳು ಕಾಂಗ್ರೆಸ್‌ಗೆ ಬರಬಹುದು ಎಂದು ಹೇಳಲಾಗಿದ್ದರೂ ಬಿಜೆಪಿ ಸಹ ಪಕ್ಷೇತ್ರರು, ಜನಾರ್ಧನರೆಡ್ಡಿ ಹಾಗೂ ದರ್ಶನ್ ಪುಟ್ಟಣ್ಣಯ್ಯನವರ ಮತ ಸೆಳೆಯುವ ಪ್ರಯತ್ನ ನಡೆಸಲಿದೆ ಎಂದು ಹೇಳಲಾಗಿದೆ.

ಮೈತ್ರಿ ಕೂಟದ ಅಭ್ಯರ್ಥಿ ಕುಪೇಂದ್ರರೆಡ್ಡಿಯವರಿಗೆ ಬಿಜೆಪಿಯ ಅಭ್ಯರ್ಥಿಗೆ ಹಂಚಿಕೆ ಮಾಡಿದ ನಂತರ ಉಳಿಯುವ 21 ಹೆಚ್ಚುವರಿ ಮತಗಳು, ಜೆಡಿಎಸ್‌ನ 19 ಮತಗಳು ಸೇರಿ 40 ಮತಗಳು ಪಕ್ಕಾ ಆಗಲಿದೆ. ಗೆಲುವಿಗೆ ಇನ್ನು 5 ಮತಗಳು ಕುಪೇಂದ್ರರೆಡ್ಡಿಯವರಿಗೆ ಅಗತ್ಯವಿದ್ದು, ಈ ಮತಗಳನ್ನು ಕಾಂಗ್ರೆಸ್‌ನಲ್ಲಿರುವ ಅಸಮಾಧಾನಿತ ಶಾಸಕರನ್ನು ಓಲೈಸಿ ಅಡ್ಡಮತದಾನ ಮಾಡಿಸಿ ಗೆಲ್ಲುವ ಲೆಕ್ಕಾಚಾರವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನಡೆಸಿದೆ. ಹಾಗಾಗಿ ರಾಜ್ಯಸಭಾ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ. ‌

ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ರಾಜ್ಯಸಭೆಯ 4 ಸ್ಥಾನಗಳಿಗೆ ಈ ತಿಂಗಳ 27 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಕಾಂಗ್ರೆಸ್‌ನಿಂದ ಅಜಯ್ ಮಾಕಾನ್, ನಾಸೀರ್ ಸೈಯದ್ ಹುಸೇನ್, ಜಿ.ಸಿ. ಚಂದ್ರಶೇಖರ್ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯ ನಾರಾಯಣಸಾ ಬಾಂಡಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇದರ ಜತೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿ ಸಹ ನಾಮಪತ್ರ ಹಾಕಿದರು.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರೆ, ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತರಿದ್ದರು. 5ನೇ ಅಭ್ಯರ್ಥಿ ಕುಪೇಂದ್ರರೆಡ್ಡಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಹ ಉಪಸ್ಥಿತರಿದ್ದರು. ಈ ಎಲ್ಲ ಅಭ್ಯರ್ಥಿಗಳು ರಾಜ್ಯಸಭೆಯ ಚುನಾವಣಾಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ರವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

Previous Post
ರಾಜ್ಯಸಭೆ ಮರು ನಾಮ ನಿರ್ದೆಶನಕ್ಕೆ ನಕಾರ ಲೋಕಸಭೆ ಅಖಾಡಕ್ಕೆ 12 ಮಂದಿ ಕೇಂದ್ರ ಸಚಿವರು?
Next Post
ರಾಜ್ಯಸಭಾ ಚುನಾವಣೆ: 7 ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆ

Recent News