ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬುವುದು ಸುಳ್ಳು
ನವದೆಹಲಿ, ಜೂ 11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಜೂನ್ 9ರಂದು ಭಾನುವಾರ ಸಂಜೆ ನಡೆದಿತ್ತು. ಮರುದಿನ, ಅಂದರೆ ಜೂನ್ 10ರಂದು ಪ್ರಮಾಣ ವಚನ ಕಾರ್ಯಕ್ರಮದ ವೇಳೆ ನಿಗೂಢ ಪ್ರಾಣಿಯೊಂದು ರಾಷ್ಟ್ರಪತಿ ಭವನದಲ್ಲಿ ಓಡಾಡಿರುವುದನ್ನು ನೆಟ್ಟಿಗರು ವಿಡಿಯೋದಲ್ಲಿ ಗುರುತಿಸಿದ್ದರು.
ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದರೆ, ವೇದಿಕೆಯ ಹಿಂಬದಿ ರಾಷ್ಟ್ರಪತಿ ಭವನದ ವರಾಂಡದಲ್ಲಿ ಚಿರತೆಯ ರೀತಿಯ ಪ್ರಾಣಿ ನಡೆದಾಡಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದ ಹಲವಾರು ಮಂದಿ, ರಾಷ್ಟ್ರಪತಿ ಭವನದಲ್ಲಿ ಚಿರತೆ ಓಡಾಡಿದೆ ಎಂದು ಬರೆದುಕೊಂಡಿದ್ದರು. ಇನ್ನೂ ಕೆಲವರು ಬೆಕ್ಕು, ನಾಯಿ ಓಡಾಡಿರಬಹುದು ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅನೇಕ ಮಾಧ್ಯಮಗಳು ಕೂಡ, ರಾಷ್ಟ್ರಪತಿ ಭವನದಲ್ಲಿ ಓಡಾಡಿರುವುದು ಯಾವ ಪ್ರಾಣಿ ಎಂಬುವುದು ಖಚಿತವಾಗುವ ಮುನ್ನವೇ, ಚಿರತೆ ಕಾಣಿಸಿಕೊಂಡಿದೆ ಎಂಬ ವರದಿ ಮಾಡಿದ್ದವು.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದಲ್ಲಿ ಸೆರೆಯಾದ ಪ್ರಾಣಿಯ ಚಿತ್ರವನ್ನು ಕೆಲ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಕಾಡು ಪ್ರಾಣಿ ಎಂದು ಹೇಳುತ್ತಿದ್ದಾರೆ. ಇದು ನಿಜವಲ್ಲ, ಕ್ಯಾಮರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ಮನೆ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಹರಡಬೇಡಿ ಎಂದು ಹೇಳಿದ್ದಾರೆ.
ಪೊಲೀಸರು ಸ್ಪಷ್ಟನೆ ಕೊಟ್ಟರೂ ಜನರು ಮಾತ್ರ ನಂಬುತ್ತಿಲ್ಲ. ದಯವಿಟ್ಟು ರಾಷ್ಟ್ರಪತಿ ಭವನದ ವರಾಂಡದ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿ. ಅಲ್ಲಿ ಓಡಾಡಿರುವುದು ಮನೆ ಬೆಕ್ಕು ಎಂಬುವುದನ್ನು ಖಚಿತಪಡಿಸಿ ಎಂದು ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ.