ರಾಹುಲ್‌ ಗಾಂಧಿಗೆ ಜಾಮೀನು ಮಂಜೂರು

ರಾಹುಲ್‌ ಗಾಂಧಿಗೆ ಜಾಮೀನು ಮಂಜೂರು

ನವದೆಹಲಿ, ಫೆ. 20: 2018ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುಲ್ತಾನ್‌ಪುರದ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ವಕೀಲ ಸಂತೋಷ್ ಪಾಂಡೆ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು, ರಾಹುಲ್ ಗಾಂಧಿ ಇಂದು ನ್ಯಾಯಾಲಯಕ್ಕೆ ಶರಣಾದರು ಮತ್ತು ನ್ಯಾಯಾಲಯವು ಅವರನ್ನು 30-45 ನಿಮಿಷಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಬಳಿಕ ಅವರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಜಾಮೀನನ್ನು ನೀಡಲಾಗಿದೆ. ಈ ಕುರಿತು ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನೀಡಲಾಗಿಲ್ಲ. ತಲಾ 25,000 ರೂಪಾಯಿಗಳ ಎರಡು ಜಾಮೀನು ಬಾಂಡ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯ ರಾಹುಲ್‌ಗೆ ಸೂಚಿಸಿದೆ.

ಆಗಸ್ಟ್ 4, 2018ರಂದು ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಮೇ 8, 2018 ರಂದು ಕರ್ನಾಟಕದಲ್ಲಿನ ಚುನಾವಣೆಯ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಬಿಜೆಪಿಯು ಪ್ರಾಮಾಣಿಕ ಮತ್ತು ಸ್ವಚ್ಛ ರಾಜಕಾರಣದ ಬದ್ಧತೆ ಬಗ್ಗೆ ಪ್ರತಿಪಾದಿಸಿದರೂ ಅದನ್ನು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪಕ್ಷದ ಅಧ್ಯಕ್ಷ ಮುನ್ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇಳಿರುವ ಹೇಳಿಕೆಯನ್ನು ದೂರುದಾರರು ಉಲ್ಲೇಖಿಸಿದ್ದಾರೆ. ರಾಹುಲ್‌ ಗಾಂಧಿ ಹೇಳಿಕೆಯ ಸಮಯದಲ್ಲಿ ಅಮಿತ್ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ರಾಹುಲ್‌ ಗಾಂಧಿಯವರ ಹೇಳಿಕೆಗೆ ಸರಿಸುಮಾರು ನಾಲ್ಕು ವರ್ಷಗಳ ಮೊದಲು, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾ ಅವರನ್ನು ಆರೋಪ ಮುಕ್ತಗೊಳಿಸಿತ್ತು. ಅಮಿತ್‌ ಶಾ ಗುಜರಾತ್‌ನಲ್ಲಿ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಈ ಬೆಳವಣಿಗೆ ನಡೆದಿತ್ತು.

ಭಾರತ್ ಜೋಡೋ ನ್ಯಾಯ ಯಾತ್ರೆಯ ಹಿನ್ನೆಲೆ ಜನವರಿ 18ರಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ರಾಹುಲ್‌ ಗಾಂಧಿ ಹಾಜರಾಗಿರಲಿಲ್ಲ. ಇಂದು ರಾಹುಲ್‌ ಗಾಂಧಿ ಕೋರ್ಟ್‌ಗೆ ಹಾಜರಾಗಿದ್ದರು. ಈ ಕುರಿತು ದೂರುದಾರ ವಿಜಯ್ ಮಿಶ್ರಾ ಮಾತನಾಡಿದ್ದು, ಬಿಜೆಪಿ ದೇಶದ ಅತಿದೊಡ್ಡ ಪಕ್ಷವಾಗಿದೆ, ಅದರ ಅಂದಿನ ಅಧ್ಯಕ್ಷರನ್ನು ಕೊಲೆಗಾರ ಎಂದು ಕರೆಯುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಈ ಮೊದಲು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಆಗಸ್ಟ್ 2018ರಲ್ಲಿ ಬಿಜೆಪಿ ನಾಯಕರೊಬ್ಬರು ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ 36 ಗಂಟೆ ಮೊದಲು ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಇಂದು ಅವರು ಸುಲ್ತಾನ್‌ಪುರ್‌ನಲ್ಲಿನ ಜಿಲ್ಲಾ ಸಿವಿಲ್ ನ್ಯಾಯಾಲಯದೆದುರು ಹಾಜರಾಗಲಿದ್ದಾರೆ. ಭಾರತ್ ಜೋಡೊ ನ್ಯಾಯ ಯಾತ್ರೆಯ ಹಳಿ ತಪ್ಪಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯನ್ನು ಮೌನವಾಗಿಸಲು ಸಾಧ್ಯವಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು.

Previous Post
ಇಂದು, ಮುಂದೆ, ಎಂದೆಂದು ಕಮಲನಾಥ್ ಕಾಂಗ್ರೆಸ್‌ನಲ್ಲೇ ಇರ್ತಾರೆ – ದ್ವಿಗಿಜಯಸಿಂಗ್
Next Post
ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್: ಸುಪ್ರೀಂ ಮಹತ್ವದ ಘೋಷಣೆ

Recent News