ರೈತ ಹೋರಾಟಗಾರ ನವದೀಪ್ ಸಿಂಗ್ ಜಲ್ಬೇರಾ ಬಂಧನ

ರೈತ ಹೋರಾಟಗಾರ ನವದೀಪ್ ಸಿಂಗ್ ಜಲ್ಬೇರಾ ಬಂಧನ

ನವದೆಹಲಿ, ಮಾ. 30: ರೈತರ ‘ದೆಹಲಿ ಚಲೋ’ ಪ್ರತಿಭಟನೆಯ ವೇಳೆ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ರೈತ ಹೋರಾಟಗಾರ ನವದೀಪ್ ಸಿಂಗ್ ಜಲ್ಬೇರಾ ಅವರನ್ನು ಬಂಧಿಸಿದ್ದಾರೆ. ಫೆಬ್ರವರಿ 21ರಂದು ಪಂಜಾಬ್-ಹರಿಯಾಣ ಗಡಿಯಲ್ಲಿ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ ಪಂಜಾಬ್‌ನ ಬಟಿಂಡಾದ ರೈತ ಶುಭಕರನ್ ಸಿಂಗ್ (21) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮುಕ್ತಿ ಮೋರ್ಚಾ (ಕೆಎಂಎಂ) ನಾಳೆ ಸಭೆಯನ್ನು ಆಯೋಜಿಸಿತ್ತು. ಆದರೆ ಇದಕ್ಕೂ ಮುನ್ನಾ ಈ ಮಹತ್ವದ ಬೆಳವಣಿಗೆ ನಡೆದಿದೆ. ಅಂಬಾಲಾ ಪೊಲೀಸರು ಗುರುವಾರ ಮೊಹಾಲಿಯಿಂದ ನವದೀಪ್ ಸಿಂಗ್ ಜಲಬೇರಾ ಅವರನ್ನು ಬಂಧಿಸಿದ್ದಾರೆ.
ನವದೀಪ್ ಸಿಂಗ್ ಜಲಬೇರಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಹರ್ಯಾಣ ಪೊಲೀಸ್‌ನ ಅಪರಾಧ ತನಿಖಾ ಸಂಸ್ಥೆಯ ಕಸ್ಟಡಿಗೆ ನೀಡಲಾಗಿದೆ. ಪೊಲೀಸರ ಪ್ರಕಾರ, ಫೆಬ್ರವರಿ 13 ರಂದು 307 (ಕೊಲೆ ಯತ್ನ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಕರಣ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜಲ್ಬೇರಾ ಅವರನ್ನು ಬಂಧಿಸಲಾಗಿದೆ.
ಅಂಬಾಲಾ ಮೂಲದ ಜಲ್ಬೆರಾ ಅವರು ನವೆಂಬರ್ 2020ರಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಚಳವಳಿಯ ಸಮಯದಲ್ಲಿ ಪೊಲೀಸ್ ವಾಟರ್ ಟಾಂಕ್‌ ಮೇಲೆ ಏರಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದರು. 2020ರಲ್ಲಿ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ದೆಹಲಿಯತ್ತ ಮೆರವಣಿಗೆ ನಡೆಸಿದ್ದರು ಮತ್ತು ಭಾರೀ ಪೊಲೀಸ್ ಬ್ಯಾರಿಕೇಡ್‌ಗಳ ಮಧ್ಯೆ ರಾಜಧಾನಿಯ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ರೈತರು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಜಲಬೇರಾ ಪರ ವಕೀಲ ರೋಹಿತ್ ಜೈನ್ ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಹಲವಾರು ಉನ್ನತ ರೈತ ಮುಖಂಡರು ಸೇರಿದಂತೆ 20 ಜನರನ್ನು ಹೆಸರಿಸಲಾಗಿದೆ. ಪೊಲೀಸರು ತಮ್ಮ ವಿರುದ್ಧ ಹೊರಿಸಿರುವ ಆರೋಪಗಳನ್ನು ರೈತರು ನಿರಾಕರಿಸಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಆಂದೋಲನಕ್ಕೆ ಬಳಸಿದ ಕಾರು ಮತ್ತು ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಲು ಜಲಬೇರಾ ಅವರ ಬಂಧನದ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಪಂಜಾಬ್ ಮತ್ತು ಹರಿಯಾಣ ನಡುವಿನ ಎರಡು ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿರುವ ರೈತರು ಇತ್ತೀಚೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದರು. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಂಬಂಧಿಸಿದ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರವನ್ನು ಒತ್ತಾಯಿಸಲು ‘ದೆಹಲಿ ಚಲೋ’ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಪೊಲೀಸರು ರೈತರನ್ನು ತಡೆದಿದ್ದರು. ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಸಿಂಗ್ ಕೊಲ್ಲಲ್ಪಟ್ಟಿದ್ದರು. ಘರ್ಷಣೆಯಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದರು.

Previous Post
ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮೇಲಿವೆ 242 ಕೇಸ್
Next Post
ಅಬಕಾರಿ ನೀತಿ ಹಗರಣ ಸಾಕ್ಷಿಗೆ ಬಿಜೆಪಿ ಲಿಂಕ್‌ ಇರುವ ಬಗ್ಗೆ ತನಿಖೆ ನಡೆಸಿ: ಎಎಪಿ

Recent News