ಲಂಡನ್ ನಲ್ಲಿ ತಂಗಿದ್ದ ಏರ್ ಇಂಡಿಯಾದ ಮಹಿಳಾ ಸಿಬ್ಬಂದ ಮೇಲೆ ಹಲ್ಲೆ

ಲಂಡನ್ : ಲಂಡನ್‌ನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಏರ್ ಇಂಡಿಯಾದ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಏರ್‌ಲೈನ್ ಭಾನುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಆರೋಪಿಯನ್ನು ಬಂಧಿಸಿದ್ದು ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಈ ದಾಳಿ ನಡೆದಿದೆ. ಮಹಿಳಾ ಸಿಬ್ಬಂದಿ ಮಲಗಿದಾಗ ಆಕೆಯ ಕೋಣೆಯನ್ನು ಅಪರಿಚಿತ ವ್ಯಕ್ತಿ ಪ್ರವೇಶ ಮಾಡಿದ್ದಾನೆ, ಆಕೇ ಎಚ್ಚರಗೊಳ್ಳುತ್ತಿದ್ದಂತೆ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ, ಬಟ್ಟೆಯ ಹಾಕುವ ಹ್ಯಾಂಗರ್‌ನಿಂದ ಆಕೆಯನ್ನು ಥಳಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಸಹಾಯಕ್ಕಾಗಿ ಆಕೇ ಕಿರುಚಿ ಕೋಣೆಯಿಂದ ಓಡಿಹೋಗಲು ಪ್ರಯತ್ನಿಸಿದಳು ಆದರೆ ಆಕೆಯನ್ನು ಆ ವ್ಯಕ್ತಿ ತಡೆಯುವ ಯತ್ನ ಮಾಡಿದ್ದಾನೆ. ಬಳಿಕ ಆಕೆಯ ಸಹೋದ್ಯೋಗಿಗಳು ರಕ್ಷಣೆಗೆ ಬಂದು ಘಟನೆಯ ನಂತರ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸದ್ಯ ದಾಳಿಕೋರನನ್ನು ಬಂಧಿಸಲಾಗಿದೆ.
ಪ್ರಮುಖ ಅಂತರಾಷ್ಟ್ರೀಯ ಸರಪಳಿಯಿಂದ ನಿರ್ವಹಿಸಲ್ಪಡುವ ಹೋಟೆಲ್‌ನಲ್ಲಿನ ಅಕ್ರಮ ಒಳನುಗ್ಗುವಿಕೆಯ ಘಟನೆಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ, ನಮ್ಮ ಸಿಬ್ಬಂದಿಗೆ ನಾವು ಅಗತ್ಯ ನೆರವು ನೀಡುತ್ತೇವೆ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದೆಂಬ ವರದಿಗಳ ಬಗ್ಗೆ ವಿಮಾನಯಾನ ಸಂಸ್ಥೆಯು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೋಟೆಲ್‌ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದ್ದು, ಇನ್ನೆರಡು ಮೂಲಗಳು ಇದು ದೈಹಿಕ ಹಲ್ಲೆ ಎಂದು ಹೇಳಿವೆ.