ಲೋಕಸಭಾ ಫಲಿತಾಂಶದ ಹೊತ್ತಲ್ಲೇ ಆತಂಕ.. ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಂಜುನಾಥ್!
ಬೆಂಗಳೂರು:- ಲೋಕಸಭಾ ಫಲಿತಾಂಶ ಪ್ರಕಟವಾಗುವ ಮೊದಲೇ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಚುನಾವಣಾ ಆಯೋಗಕ್ಕೆ ಒಂದು ಮಹತ್ವದ ಪತ್ರ ಬರೆದಿದ್ದು, ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಸಲ ಭಾರೀ ಸುದ್ದಿಯಾಗಿದೆ. ಹಾಲಿ ಸಂಸದ ಡಿಕೆ ಸುರೇಶ್ ಅವರನ್ನು ಸೋಲಿಸಲೇಬೇಕು ಎಂದು ಮೈತ್ರಿ ನಾಯಕರು ಖ್ಯಾಯ ಹೃದ್ರೋಗ ತಜ್ಞ ವೈದ್ಯ ಡಾ. ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದಾರೆ. ಹೀಗಾಗಿ ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಈಗಾಗಲೇ ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಇದೀಗ ಯಾರು ಗೆಲ್ಲಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಇದರ ಮಧ್ಯ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಮಂಜುನಾಥ್ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರಲ್ಲಿನ ಸಂತಸ ಮನೆ ಮಾಡಿದ್ದು, ಫಲಿತಾಂಶಕ್ಕಾಗಿ ಕಾತರರಿಂದ ಕಾಯುತ್ತಿದ್ದಾರೆ. ಹೀಗಾಗಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ, ಗಲಾಟೆಗಳು ಆಗಬಾರದು ಎಂದು ಡಾ ಮಂಜುನಾಥ್ ಅವರು ಮುಂಜಾಗ್ರತಾವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ ಮಾಡಬೇಕು.ಎಣಿಕೆ ಕೇಂದ್ರದ ಸುತ್ತಲೂ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ನಿಯೋಜನೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು.ಯಾವುದೇ ವ್ಯಕ್ತಿಯ ಅನಧಿಕೃತ ಪ್ರವೇಶ ಅಥವಾ ಉಲ್ಲಂಘನೆಯ ಪ್ರಯತ್ನಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.ಪಕ್ಷದ ಏಜೆಂಟ್‌ಗಳು ಸೇರಿದಂತೆ ಮತ ಎಣಿಕೆ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಬೇಕು,ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಅವರ ಉಪಸ್ಥಿತಿಯು ಅತ್ಯಗತ್ಯವಾಗಿದ್ದು, ಅವರ ಪೂರ್ವ ಅನುಮತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಸಿಬಿಐ ತನಿಖೆಯಿಂದ ಸಿಎಂ ಹೇಗೆ ಭಾಗಿಯಾಗಿದ್ದಾರೆಂದು ತಿಳಿಯಲಿದೆ: ಜೋಶಿ
ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ಆದಿಯಾಗಿ ಎಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಮೊದಲು ಮಂತ್ರಿಯನ್ನು ಬಂಧಿಸಬೇಕು. ನಂತರ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಿಎಂ ಇದರಲ್ಲಿ ಹೇಗೆ ಭಾಗಿಯಾಗಿದ್ದಾರೆಂಬ ಸಂಗತಿ ಗೊತ್ತಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ, ದಾರಿ ತಪ್ಪಿಸುವಲ್ಲಿ ನಿಸ್ಸೀಮವಾಗಿದೆ. ಇದೀಗ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾವುದೇ ಸಂಪರ್ಕವಿಲ್ಲದ ಒಂಬತ್ತು ಕಂಪನಿಗಳಿಗೆ ಹಣ ವರ್ಗಾವಣೆಯಾಗಿದೆ. ಇಷ್ಟಾದರೂ ಆರೋಪ ಹೊತ್ತಿರುವ ಸಚಿವನಿಂದ ರಾಜೀನಾಮೆ ಕೊಡಿಸಲು ಆಗುತ್ತಿಲ್ಲ ಎಂದು ಹರಿಹಾಯ್ದರು.ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದೊಂದಿಗೆ ಜಯಸಾಧಿಸಲಿದೆ ಎನ್ನುವುದು ಬಂದಿದೆ. ಚುನಾವಣೆ ಮೊದಲು, ನಂತರವೂ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮೋದಿ ನೇತೃತ್ವದಲ್ಲಿ ನಾವು ಜಯಗಳಿಸಲಿದ್ದೇವೆ ಎಂಬ ಮಾತು ಹೇಳಿದ್ದೆ. ಅದೇ ತರಹ ಅಮಿತ್ ಶಾ, ರಾಜನಾಥ್ ಸಿಂಗ್ ಎಲ್ಲರೂ ಹೇಳಿದ್ದರು. ಅದರ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಹೆಚ್ಚು ಕಡಿಮೆ ಪಕ್ಷದ ನಾಯಕರ ಭವಿಷ್ಯಗಳು ಖಚಿತವಾಗಿವೆ. ಚುನಾವಣೆ ಫಲಿತಾಂಶ ಬಳಿಕ ಎಕ್ಸಿಟ್ ಪೋಲ್‌ಗಿಂತಲೂ ಬಿಜೆಪಿ 400ಕ್ಕಿಂತ ಅಧಿಕ ಸೀಟ್‌ಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರಿಗೆ ದೇಶದ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಸಿಎಜಿ ಸೇರಿದಂತೆ ಯಾವುದೇ ರೀತಿಯಾದ ಸಂವಿಧಾನ ಆಧಾರದ ಮೇಲೆ ನಿರ್ಮಾಣವಾದ ಸ್ವಾಯತ್ತ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ. ಜನತಾ ಜನಾರ್ಧನನ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ಜೋಶಿ ಕುಟುಕಿದರು.ನೇಹಾ, ಅಂಜಲಿ ರೀತಿಯಲ್ಲಿ ಹತ್ಯೆ ಮಾಡಲಾಗುವುದು ಎಂದು ಶಿಕ್ಷಕಿ ದೀಪಾಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಪೊಲೀಸರಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಜನಪ್ರತಿನಿಧಿಗಳೆಂದರೆ ಪೋಲಿಸರಿಗೆ ಭಯವೇ ಇಲ್ಲದಾಗಿದೆ. ಸಿಎಂ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ಬೆದರಿಕೆ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಇಂತಹ ಘಟನೆಗಳು ನಡೆಯಲು ರಾಜ್ಯ ಸರ್ಕಾರದ ನಡವಳಿಕೆಯೇ ಕಾರಣ ಎಂದು ದೂರಿದರು.